ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶೈಕ್ಷಣಿಕ ಫಲಿತಾಂಶವನ್ನು ಹೆಚ್ಚಿಸಲು ಬೋಧನೆಯಲ್ಲಿ ನೂತನ ಪದ್ದತಿಗಳನ್ನು ಅಳವಡಿಸಿಕೊಳ್ಳಿ – ಕೆ. ರತ್ನಯ್ಯ
ಕೋಲಾರ : ಶಿಕ್ಷಕರು ಬೋಧನೆಯಲ್ಲಿ ನೂತನ ಪದ್ದತಿಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದರಿಂದ ಜಿಲ್ಲೆಯ ಫಲಿತಾಂಶವನ್ನು ಮೊದಲ ಸ್ಥಾನಕ್ಕೆ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ. ರತ್ನಯ್ಯ ಅವರು ತಿಳಿಸಿದರು.
ಇಂದು ಕೆಂಬೋಡಿ ಗ್ರಾಮದ ಜನತಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿದಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಮಕ್ಕಳ ಕಲಿಕೆಯಲ್ಲಿ ಏನು ಕೊರತೆಯಿದೆ ಅದನ್ನು ಗುರ್ತಿಸಿ ಪರಿಹರಿಸುವ ಕಾರ್ಯ ಮಾಡುವುದು ಬ್ರಿಜ್ಡ್ಕೋರ್ಸ್ನ ಉದ್ದೇಶವಾಗಿದೆ. ಮಕ್ಕಳನ್ನು ಶೈಕ್ಷಣಿಕ ಪ್ರಗತಿಗೆ ಪಾಸ್ ಮಾಡುವುದು ಮುಖ್ಯವಲ್ಲ. ಯಾವ ವಿಷಯಗಳಲ್ಲಿ ಹಿಂದೆ ಉಳಿದಿದ್ದಾರೆ ಅಂತಹ ಮ್ಕಕಳಿಗೆ ಕ್ರಿಯಾಯೋಜನೆ ರೂಪಿಸಿ ಹೆಚ್ಚು ಒತ್ತು ಕೊಡಬೇಕು ಎಂದು ತಿಳಿಸಿದರು.
ಕಿರುಪರೀಕ್ಷೆ, ಮಧ್ಯಪರೀಕ್ಷೆಗಳಲ್ಲಿ ಮಕ್ಕಳು ತಪ್ಪು ಉತ್ತರ, ತಪ್ಪಾಗಿ ಚಿತ್ರಗಳನ್ನು ಬಿಡಿಸಿದ್ದರೆ, ಸರಿಪಡಿಸುವಂತಹ ಜವಾಬ್ದಾರಿಯನ್ನು ಶಿಕ್ಷಕರು ವಹಿಸಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಅಂಕಗಳಿಂದ ವಂಚಿತರಾಗದಂತೆ ಬದಲಾವಣೆ ಮಾಡಬೇಕು. ಶಿಕ್ಷಕರು ಪ್ರಶಸ್ತಿಗಳ ಹಿಂದೆ ಬೀಳದೆ ಪ್ರಶಸ್ತಿಗಳು ನಮ್ಮನ್ನು ಹಿಂಬಾಲಿಸುವಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರತಿದಿನ ವಿಶೇಷವಾಗಿ ಕೈಗೊಳ್ಳುವ ತರಗತಿಗಳ ಮಾಹಿತಿಯ ವಿವರಗಳನ್ನು ಇಲಾಖೆಗೆ ತಲುಪಿಸಬೇಕು. ಮಕ್ಕಳಿಗೆ ರಸಪ್ರಶ್ನೆ, ಸಂವಾದ, ಸಂವಹನ ಕಾರ್ಯಕ್ರಮಗಳ್ನು ನಡೆಸಿದರ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಬೈಸಿಕಲ್ ವಿತರಣೆ ಎಲ್ಲಾ ತಾಲ್ಲೂಕುಗಳಿಗೆ ತಲುಪಿಸಿದ್ದು, ಮಾಲೂರು ತಾಲ್ಲೂಕಿಗೆ ಬೈಸಿಕಲ್ ವಿತರಣೆ ಬಾಕಿ ಎಂದು ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತಾ ಕ್ರಮದಿಂದ ಗೋಡೆಗಳು ಶಿಥಿಲವಾಗಿರುವ ಸ್ಥಳಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಬೇಡಿ ಹಾಗೂ ಮಕ್ಕಳ ಬ್ಯಾಗ್ಗಳ ತೂಕವನ್ನು ಕಡಿಮೆ ಮಾಡಬೇಕು. ಎಂ.ಎಚ್.ಆರ್ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಜಲಶಕ್ತಿ ಅಭಿಯಾನದಡಿ ಎಲ್ಲಾ ಶಾಲೆಗಳು ಜಲಸಂಗ್ರಹ, ಮಳೆ ನೀರುಕೊಯ್ಲು ಪದ್ದತಿಗಳನ್ನು ಅಳವಡಿಸಬೇಕು. ನೀರು ಸಂಗ್ರಹವಾಗುವಂತೆ ಕ್ರಮವಹಿಸಬೇಕು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಬೇಕು. ಶಾಲಾ ಕೈತೋಟ ನಿರ್ಮಿಸಲು ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ನಾಗರಾಜಗೌಡ ಅವರು ಮಾತನಾಡಿ, ಜಿಲ್ಲೆಯು ಕಳೆದ ಸಾಲಿನ ಫಲಿತಾಂಶದಲ್ಲಿ 8 ನೇ ಸ್ಥಾನ ಹಾಗೂ ಕಲಿಕೆಯ ಗುಣಮಟ್ಟದಲ್ಲಿ 7 ನೇ ಸ್ಥಾನ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಬರುವಂತೆ ಮುಖ್ಯ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿ ಪಾಸಾಗಬೇಕು ಎಂಬುದು ಪೋಷಕರ ಆಕಾಂಕ್ಷಿಯಾಗಿರುತ್ತದೆ. ಶಿಕ್ಷಕರು ಸೃಜನಾತ್ಮಕವಾಗಿ, ವಿಶೇಷ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿರುತ್ತದೆ. ಕಲಿಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ ಜೊತೆ ಜೊತೆಯಲ್ಲಿ ಪ್ರತಿ ಮಗು ಕನಿಷ್ಠ ಗುಣಮಟ್ಟದ ಕಲಿಕೆಯಿಂದ ಪಾಸಾಗುವ ರೀತಿಯಲ್ಲಿ ಶಿಕ್ಷಕರು ಪಾತ್ರವಹಿಸಬೇಕಾಗಿದೆ ಎಂದರು.
ಶಾಲಾ ವಾತಾವರಣ ಸಮರ್ಪಕವಾಗಿದ್ದರೆ ಮಕ್ಕಳ ಕಲಿಕೆ, ಸುಲಲಿತವಾಗಿರುತ್ತದೆ. ಹಾಗಾಗಿ ಮುಖ್ಯ ಶಿಕ್ಷಕರು ಮನಸ್ಸು ಮಾಡಿ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮುಂದಾಗಬೇಕು ಎಂದು ತಿಳಿಸಿದರು.
ಕೆಜಿಎಫ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಅವರು ಮಾತನಾಡಿ, ಮುಖ್ಯ ಶಿಕ್ಷಕರು ಇಲಾಖೆಯಲ್ಲಿ ಕಾಲ ಕಾಲಕ್ಕೆ ಆಗುವ ಸುತ್ತೋಲೆಗಳು ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆ ಸುತ್ತೋಲೆಗಳ ಮಾಹಿತಿಯನ್ನು ಮಕ್ಕಳಿಗೆ ನೀಡಬೇಕಾಗುತ್ತದೆ. ಸಹ ಶಿಕ್ಷಕರೊಂದಿಗೆ ಚರ್ಚಿಸಿ ಮಕ್ಕಳ ಶಿಕ್ಷಣ ಗುಣಮಟ್ಟವನ್ನು ವಿಶ್ಲೇಷಣೆ ಮಾಡಬೇಕು ಎಂದು ತಿಳಿಸಿದರು.
ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು. ಬರವಣಿಗೆ ಕೌಶಲ್ಯವನ್ನು ರೂಪಿಸಬೇಕು. ಪ್ರಸಕ್ತ ವರ್ಷದಲ್ಲಿ ಪ್ರತಿ ಶಾಲೆಯ ಶಿಕ್ಷಕರು ಪ್ರಶ್ನೆಪತ್ರಿಕೆಯ್ನು ಹೊಸ ಪಠ್ಯಕ್ಕೆ ಅನುಗುಣವಾಗಿ ರಚಿಸಿಕೊಂಡು ಪರೀಕ್ಷೆಗಳನ್ನು ಕೈಗೊಳ್ಳಬೇಕು. ಮಕ್ಕಳಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸೋಮೇಶ್, ಶ್ರೀನಿವಾಸಪುರ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಯಾದ ರೇಣುಕಮ್ಮ, ಡಿವೈಪಿಸಿ ಶ್ರೀನಿವಾಸಮೂರ್ತಿ, ಎಪಿಸಿ ಮೋಹನ್ಬಾಬು, ಜನತಾ ಪ್ರೌಶಾಲೆಯ ಮುಖ್ಯ ಶಿಕ್ಷಕರಾದ ಗೋಪಾಲರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.