ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸೋಣ – ಜೆ. ಮಂಜುನಾಥ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸೋಣ – ಜೆ. ಮಂಜುನಾಥ್

ಕೋಲಾರ : ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದತೆಗೆ ಯಾವುದೇ ಧಕ್ಕೆಯಾಗದಂತೆ ಎಲ್ಲರೂ ಸೇರಿ ಗೌರಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು. 

  ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಧರ್ಮದ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಶಾಂತಿ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ಹಬ್ಬಗಳನ್ನು ಎಲ್ಲಾ ಧರ್ಮದವರು ಒಟ್ಟಿಗೆ ಸೇರಿ ಪ್ರೀತಿ, ವಿಶ್ವಾಸದಿಂದ ಆಚರಿಸಿ. ಹಬ್ಬಗಳ ಆಚರಣೆ ಸಂದರ್ಭದಲ್ಲಿ ಯಾರೊಬ್ಬರಿಗೂ ತೊಂದರೆ ಉಂಟಾಗಬಾರದು. ಹಬ್ಬಗಳ ಆಚರಣೆ, ಪ್ರೀತಿ ವಿಶ್ವಾಸಗಳನ್ನು ಬೆಳೆಸುವಂತಿರಬೇಕು ಎಂದು ತಿಳಿಸಿದರು. 

  ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಇಡಲು ಸಂಬಂಧಿಸಿದ ಇಲಾಖೆಗಳಿಂದ ಹಾಗೂ  ಪೊಲೀಸ್ ಇಲಾಖೆಯಿಂದ ಅನುಮತಿ ಕಡ್ಡಾಯ. ಡಿ.ಜೆ. ಸೌಂಡನ್ನು ಬಳಸುವುದನ್ನು ಹುಬ್ಬಳ್ಳಿ ಕೋರ್ಟ್ ರದ್ದುಪಡಿಸಿದೆ. ಆದ್ದರಿಂದ ಡಿ.ಜೆ ಸೌಂಡ್ ಬಳಕೆಗೆ ಅವಕಾಶವಿಲ್ಲ. ಮೆರವಣಿಗೆಯು ಎಸ್.ಎನ್.ಆರ್ ಆಸ್ಪತ್ರೆಯ ಬಳಿ ಹೋಗುವಂತಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳಿದ್ದು ಅವರಿಗೆ ತೊಂದರೆಯಾಗಬಾರದು. ಯಾವುದೇ ರೀತಿಯ ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಮಾತನಾಡಿ, ಗಣಪತಿಯನ್ನು ಇಡಲು ಇಲ್ಲಿಯವರೆಗೆ 790 ಅರ್ಜಿಗಳು ಅನುಮತಿಗಾಗಿ ಬಂದಿವೆ. ಇನ್ನೂ 300 ರಿಂದ 400 ಅರ್ಜಿಗಳು ಬರುವ ನಿರೀಕ್ಷೆಯಿದೆ. ಗಣಪತಿ ಇಡುವ ಪೆಂಡಾಲ್‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಅಗ್ನಿ ಅವಘಡಗಳು, ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದರು. 

 ಕಳೆದ ವರ್ಷ ಗಣೇಶ ವಿಸರ್ಜನೆÀಯ ಮೆರವಣಿಗೆಗೆ ಬಳಸಿರುವ ಮಾರ್ಗವನ್ನೆ ಈ ಸಂದರ್ಭದಲ್ಲಿ ಮೆರವಣಿಗೆಗೆ ಅನುಸರಿಸಬೇಕು. ಗ್ರಾಮೀಣ ಪ್ರದೇಶಗಳÀಲ್ಲಿ ವಿಸರ್ಜನೆಯನ್ನು ಸೂರ್ಯಾಸ್ತದೊಳಗೆ ಮಾಡಬೇಕು. ಗಣಪತಿಯ ವಿಸರ್ಜನೆ ಆದ ತಕ್ಷಣ ಪೆಂಡಾಲ್‍ನ್ನು ತೆರವುಗೊಳಿಸಬೇಕು. ಸುಪ್ರಿಂ ಕೋರ್ಟ್ ನಿರ್ದೇಶನದಂತೆ 65 ಡೆಸಿಬಲ್‍ಗಿಂತ ಹೆಚ್ಚಿನ ಶಬ್ದವನ್ನು ಬಳಸುವಂತಿಲ್ಲ. ಹಬ್ಬದ ಸಂದರ್ಭ, ಗಣಪತಿ ವಿಸರ್ಜನೆ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

 ಸಭೆಯಲ್ಲಿ ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹಮದ್ ಸುಜಿತಾ, ಕೋಲಾರ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಾಹ್ನವಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.