ವರದಿ:ಕೆ.ಜಿ.ವೈದ್ಯ
ಕುಂದಾಪುರ : ಸಪ್ತ ಮೋಕ್ಷಪ್ರದ ಪುಣ್ಯ ಕ್ಷೇತ್ರಗಳಲ್ಲಿ ಕೋಟೇಶ್ವರ ಒಂದು. ಇಂತಹ ಪುಣ್ಯ ಕ್ಷೇತ್ರದ ನಿವಾಸಿಗಳು ನಾವಾಗಿರುವುದೇ ಒಂದು ಪುಣ್ಯವಿಶೇಷ ಮತ್ತು ಹೆಮ್ಮೆ. ಇಂತಹ ಕೋಟಿಲಿಂಗೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಯಥಾನುಶಕ್ತಿ ಭಾಗಿಗಳಾಗಬೇಕು ಎಂಬುದು ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಆಶಯ. ಆ ನಿಟ್ಟಿನಲ್ಲಿ ಸದಸ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಲಾಗಿದೆ – ಎಂದು ಕೋಟೇಶ್ವರದ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಡಿಗ ಹೇಳಿದರು.
ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಸಮಿತಿಯ ಸದಸ್ಯರಿಂದ ಸಂಗ್ರಹಿಸಲಾದ ದೇಣಿಗೆಯ ಮೊತ್ತ ಸುಮಾರು ಮೂವತ್ತೆರಡುವರೆ ಲಕ್ಷ ರೂಪಾಯಿಗಳ ಚೆಕ್ಕನ್ನು ದೇವಳ ಪ್ರಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತರಿಗೆ ಹಸ್ತಾ0ತರಿಸಿ ಅವರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಯ ಪರವಾಗಿ ಚೆಕ್ ಸ್ವೀಕರಿಸಿದ ಸಮಿತಿ ಅಧ್ಯಕ್ಷ ಕಾರಂತರು ಕೃತಜ್ಞತೆ ಸಮರ್ಪಿಸಿ, ದೇವಳ ಜೀರ್ಣೋದ್ಧಾರ ಕಾಮಗಾರಿಗಳಲ್ಲಿ ಈ ವರೆಗೆ ಗರ್ಭಗುಡಿಯ ಮಾಡು, ಎಡನಾಳಿ ಮಾಡು, ತೀರ್ಥಮಂಟಪ, ತಾಮ್ರದ ಹೊದಿಕೆ ಹಾಗೂ ನಾಗಬನ ನವೀಕರಣ ಸೇರಿ ಸುಮಾರು 1. 57 ಕೋಟಿ ರೂ. ವೆಚ್ಚದ ಕಾಮಗಾರಿಗಳು ಮುಗಿದಿವೆ. ಧ್ವಜಮರ, ಸುತ್ತು ಪೌಳಿಗಳು, ಹೆಬ್ಬಾಗಿಲು ನವೀಕರಣ ಸೇರಿದಂತೆ ಸುಮಾರು ಮೂರು ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯಬೇಕಾಗಿದ್ದು, ಊರ – ಪರವೂರ ದಾನಿಗಳು, ಭಕ್ತರು, ಸಂಘ – ಸಂಸ್ಥೆಗಳು ಉದಾರ ದೇಣಿಗೆಯ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ದೇವಳದ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ್ ಐತಾಳ ಶುಭಾಶಂಸನೆ ಮಾಡಿದರು.
ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನೂ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು. ನೂತನ ಅಧ್ಯಕ್ಷ ರಾಮಚಂದ್ರ ಉಪಾಧ್ಯರಿಗೆ ಹಾಲಿ ಅಧ್ಯಕ್ಷ ಚಂದ್ರಶೇಖರ ಅಡಿಗ ದಾಖಲೆ ಪತ್ರಗಳನ್ನು ಹಸ್ತಾ0ತರಿಸಿ ಶುಭ ಕೋರಿದರು. ಕಾರ್ಯದರ್ಶಿ ಪ್ರಭಾಕರ ಮಿತ್ಯಂತ ನೂತನ ಕಾರ್ಯದರ್ಶಿ ಅನಸೂಯ ಭಟ್ ರಿಗೆ ಫೈಲ್ ಹಸ್ತಾ0ತರಿಸಿದರು. ಉತ್ಸವ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ, ಕೋಶಾಧಿಕಾರಿ ಬಿ. ಕುಮಾರ ಐತಾಳ, ಸುರೇಂದ್ರ ಐತಾಳ, ಜೀರ್ಣೋದ್ಧಾರ ಸಮಿತಿ ಖಜಾಂಚಿ ಪ್ರಭಾಕರ, ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಭಾಕರ ಮಿತ್ಯಂತ ಸ್ವಾಗತಿಸಿ, ವಂದಿಸಿದರು.