ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶುಂಠಿ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಪಂಚದಲ್ಲೆ ಭಾರತದಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತದೆ. ಈ ಬೆಳೆಯಿಂದ ಹೆಚ್ಚಿನ ಲಾಭ ಗಳಿಸುತ್ತಿರುವದರಿಂದ ರೈತರು ಈ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ‘ವೈಜ್ಞಾನಿಕ ಶುಂಠಿ ಬೇಸಾಯ ಕ್ರಮಗಳು’ ಎಂಬ ಅಂತರ್ಜಾಲ ತರಬೇತಿ ಕಾರ್ಯಕ್ರಮವನ್ನು ದಿ: 17.08.2020 ರಂದು ಹಮ್ಮಿಕೊಂಡಿತ್ತು.
ಪ್ರಾರಂಭದಲ್ಲಿ ಡಾ. ಜ್ಯೋತಿ ಕಟ್ಟೇಗೌಡರ, ವಿಜ್ಞಾನಿ (ತೋಟಗಾರಿಕೆ) ರವರು ಮಾತನಾಡಿ ಮುಖ್ಯವಾಗಿ ಸುಧಾರಿತ ತಳಿಗಳು ಬಿತ್ತನೆ ಗಡ್ಡೆಗಳ ಆಯ್ಕೆ, ಸುಧಾರಿತ ನಾಟಿ ಪದ್ಧತಿ, ಹೊದಿಕೆ ಮತ್ತು 40-60 ದಿನಗಳ ನಂತರ ಮಣ್ಣು ಏರಿಸುವುದುರ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಸುಧಾರಿತ ತಳಿಗಳನ್ನು ಉಪಯೋಗಿಸುವುದರಿಂದ ಹೆಚ್ಚಿನ ಇಳುವರಿ ಮತ್ತು ಬಹಳ ದಿನಗಳವರೆಗೆ ಗಡ್ಡೆಗಳನ್ನು ಶೇಖರಿಸಲು ಸಹಾಯವಾಗುತ್ತದೆ. ಸಾಂಪ್ರದಾಯಿಕವಾಗಿ ಗಡ್ಡೆಗಳನ್ನು ಬಿತ್ತಿದಾಗ, 1500-2000 ಕೆ.ಜಿ. ಪ್ರತಿ ಹೆ. ಬಿತ್ತನೆ ಗಡ್ಡೆಗಳು ಬೇಕಾಗುತ್ತವೆ. ಅದೇ ಸುಧಾರಿತ ನಾಟಿ ಪದ್ಧತಿಯಲ್ಲಿ 400-500 ಕೆ.ಜಿ. ಪ್ರತಿ ಹೆ. ಬಿತ್ತನೆ ಗಡ್ಡೆಗಳು ಸಾಕಾಗುತ್ತವೆ. ಅಲ್ಲದೇ, ಸುಧಾರಿತ ಪದ್ದತಿಯಿಂದ ರೋಗರಹಿತ ಸಸಿಗಳನ್ನು ಪಡೆಯಬಹುದು. ಹೊದಿಕೆಯನ್ನು ಸಾವಯವ ಹಸಿರು ಎಲೆಗಳಿಂದ ಮಾಡುವದರಿಂದ ಬೆಳೆ ಅವಧಿಯಲ್ಲಿ ಮಣ್ಣಿನ ಉಷ್ಣಾಂಶ ಕಾಪಾಡಲು ಮತ್ತೇ ಕಳೆಗಳನ್ನು ತಡೆಯಲು ಸಹಾಯವಾಗುತ್ತದೆ. ಡಾ. ಅನಿಲಕುಮಾರ್, ವಿಜ್ಞಾನಿ (ಮಣ್ಣು ವಿಜ್ಞಾನ) ರವರು ಮಾತನಾಡಿ, ಕೊಟ್ಟಿಗೆ ಗೊಬ್ಬರ 25 ಟನ್ ಮತ್ತು 217 ಕಿ.ಗ್ರಾಂ ಯೂರಿಯಾ, 312 ಕೆ.ಜಿ. ಎಸ್.ಎಸ್.ಪಿ ಮತ್ತು 83 ಕೆ.ಜಿ. ಎಮ್.ಒ.ಪಿ ಜೊತೆಗೆ ಹಸಿರೆಲೆ ಗೊಬ್ಬರವನ್ನು ಹಾಕಿದಾಗ ಶುಂಠಿಯ ಪೋಷಕಾಂಶಗಳ ಕೊರತೆಯನ್ನು ನಿಗಿಸಬಹುದು. ಲಘು ಪೋಷಕಾಂಶಗಳಾದ ಕಬ್ಬಿಣ, ತಾಮ್ರ ಮತ್ತು ಇತರೆ ಪೋಷಕಾಂಶಗಳನ್ನು ಜಿಂಜರ್ ರಿಜ್ (ಮಣ್ಣಿನ ರಸಸಾರ 7 ಕ್ಕಿಂತ ಹೆಚ್ಚು ಇದ್ದಲ್ಲಿ) ಮತ್ತು ಜಿಂಜರ್ ಸ್ಪೇಷಲ್ (ಮಣ್ಣಿನ ರಸಸಾರ 7 ಕ್ಕಿಂತ ಕಡಿಮೆ ಇದ್ದಲ್ಲಿ) ಬಳಸಬೇಕೆಂದು ತಿಳಿಸಿದರು.
ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) ರವರು ಅಂತರ್ಜಾಲ ಕಾರ್ಯಾಗಾರದಲ್ಲಿ ರೈತರನ್ನು ಉದ್ದೇಶಿಸಿ ಶುಂಠಿಯ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾತನಾಡಿ, ಬರೀ ರಾಸಾಯನಿಕ ಬಳಕೆಗಷ್ಟೇ ಒತ್ತು ಕೊಡದೇ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವದರಿಂದ ರೋಗ ಮತ್ತು ಕೀಟಗಳನ್ನು ಹತೋಟಿ ಮಾಡಬಹುದು. ಶುಂಠಿಯ ಮುಖ್ಯ ರೋಗಗಳಾದ ಗಡ್ಡೆಕೊಳೆ ರೋಗ, ಎಲೆ ಚುಕ್ಕೆ ರೋಗ, ದುಂಡಾಣುವಿನಲ್ಲಿ ಬರುವಂತಹ ಸೊರಗು ರೋಗ, ಜಂತುಹುಳುವಿನಿಂದ ಆಗುವ ಹಾನಿ, ಕಾಂಡ ಕೊರೆಯುವ ಹುಳುವಿನ ಬಾಧೆ, ಇವುಗಳ ಕಾರಣ ಅವುಗಳ ಹರಡುವಿಕೆ ಮತ್ತು ಅವುಗಳ ಬೆಳವಣಿಗೆಗೆ ಬೇಕಾಗುವಂತಹ ಪೂರಕ ವಾತಾವರಣದ ಬಗ್ಗೆ ವಿವರಿಸಿದರು. ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮಾ ಮತ್ತು ಸುಡೊಮೊನಾಸ್, ಉಪಚರಿಸಿದ ಕೊಟ್ಟಿಗೆ ಗೊಬ್ಬರ ಬಳಸುವುದು ಮತ್ತು ಜೈವಿಕ ಪೀಡೆನಾಶಕಗಳ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಕೂಡ ಜಂತುಹುಳುಗಳ ಬಾಧೆಯನ್ನು ಕಡಿಮೆಗೊಳಿಸಬಹುದು. ಅಲ್ಲದೇ ಶುಂಠಿ ಬಿತ್ತನೆಯ ಪೂರ್ವ ಕೈಗೊಳ್ಳಬೇಕಾದ ಕ್ರಮಗಳು ಅಂದರೆ, ಏರು ಸಸಿಮಡಿ ತಯಾರಿಕೆ ಬಿತ್ತನೆಯ 40-45 ದಿನಗಳ ಮುಂಚೆ ಮಡಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಸೌರ್ಯಿಕರಣ ಮಾಡುವುದರಿಂದ ಭೂಮಿಯಲ್ಲಿರುವ ರೋಗಾಣುಗಳನ್ನು ಹತೋಟಿ ಮಾಡಬಹುದು. ಆರೋಗ್ಯವಂತ ತೋಟದಿಂದ ಬಿತ್ತನೆ ಗಡ್ಡೆಗಳನ್ನು ಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಿ ಬಿತ್ತುವುದರಿಂದ ಆಗುವ ಅನುಕೂಲಗಳನ್ನು ತಿಳಿಸಿದರು. ರಕ್ಷಣಾತ್ಮಕವಾಗಿ ಹಲವು ರಾಸಾಯನಿಕಗಳ ಸಿಂಪರಣೆಯನ್ನು ಕೈಗೊಂಡು ರೋಗ ಹತೋಟಿ ಮಾಡಬಹುದೆಂದು ತಿಳಿಸಿದರು. ಅಲ್ಲದೇ ಜಂತುಹುಳುಗಳ ರೋಗ ನಿರೋಧಕತೆ ಹೊಂದಿರುವ ಐಐಎಸ್ಆರ್ –ಮಹಿಮಾ ತಳಿಯ ಬಗ್ಗೆ ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಒಟ್ಟು 46 ಜನರು ಭಾಗವಹಿಸಿದ್ದರು ಇದರಲ್ಲಿ 40 ಜನ ರೈತರು ಮತ್ತು 7 ಜನ ವಿಜ್ಞಾನಿಗಳು ಭಾಗವಹಿಸಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೆಂದ್ರ, ಕೋಲಾರರವರಿಗೆ ಸಂಪರ್ಕಿಸಿ.