ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ವಿದ್ಯಾಗಮ ವಿನೂತನ ಯೋಜನೆಯಾಗಿದ್ದು, ಇದನ್ನು ವಿದ್ಯಾರ್ಥಿಕ್ರೇಂದ್ರೀಕೃತವಾಗಿಸಿ ಪೋಷಕರು, ಎಸ್ಡಿಎಂಸಿ ಸಹಕಾರ, ಸ್ವಯಂಸೇವಕರ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಎಂದು ಕ್ಷಣ ಗುಣಮಟ್ಟ ವಿಭಾಗದ ನಿರ್ದೇಶಕರೂ ಹಾಗೂ ವಿದ್ಯಾಗಮನ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಗೋಪಾಲಕೃಷ್ಣ ಸೂಚನೆ ನೀಡಿದರು.
ಜಿಲ್ಲೆಗೆ ಆಗಮಿಸಿದ್ದ ಅವರು ನಗರದ ಡಿಡಿಪಿಐ ಕಚೇರಿಯಲ್ಲಿ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಸಾಧನೆಗಾಗಿ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕುವಾರು ಮ್ಯಾಪಿಂಗ್ ಆಗದಿರುವ ಮಕ್ಕಳನ್ನು ಗುರುತಿಸಿ, ಅಂತಹ ವಿದ್ಯಾರ್ಥಿಗಳನ್ನು ವಿದ್ಯಾಗಮದಡಿ ತರಲು ಮೊಬೈಲ್ ಸ್ಕೂಲ್ ಮಾಡಲು ಅವಕಾಶವಿದೆ ಎಂದು ತಿಳಿಸಿ, ಅದಕ್ಕಾಗಿ ಮೊಬೈಲ್ ಸ್ಕ್ವಾಡ್ ನೇಮಿಸುವ ಬಗ್ಗೆ ಸೂಚಿಸಿದರು.
ಮಕ್ಕಳನ್ನು ಶಾಲೆಗೆ ಕರೆಸದೇ ಅವರು ಇರುವ ಸ್ಥಳಗಳಲ್ಲೇ ಹೋಗಿ ಅವರ ಕಲಿಕೆಗೆ ನೆರವಾಗಲು ಸೂಚಿಸಿದ ಅವರು,ಜಿಲ್ಲೆಯಲ್ಲಿ ಯಾವುದೇ ಸೌಲಭ್ಯವಿರದ ವಿದ್ಯಾರ್ಥಿಗಳು ಶೇ.20 ರಷ್ಟಿದ್ದು, ಆ ವಿದ್ಯಾರ್ಥಿಗಳನ್ನು ತಲುಪಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಅವರು, ಪ್ರತಿ 15 ದಿನಕ್ಕೊಮ್ಮೆ ಈ ವಿದ್ಯಾರ್ಥಿಗಳ ಪ್ರಗತಿ ವರದಿ ಸಲ್ಲಿಸಲು ಸೂಚಿಸಿದರು.
ವಿದ್ಯಾಗಮ ಅನುಷ್ಟಾನಕ್ಕೆ ಶಿಕ್ಷಕರಿಗೆ ತರಬೇತಿ ನೀಡುವುದು, ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಜಿಲ್ಲೆಯಲ್ಲಿನ 1660 ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಳ್ಳಲು ಸೂಚಿಸಿದರು.
ತಾಲ್ಲೂಕುವಾರು
ಮ್ಯಾಪಿಂಗ್ ಮಾಡಿ
ತಾಲ್ಲೂಕುವಾರು, ಕ್ಲಸ್ಟರ್ ವಾರು ಮ್ಯಾಪಿಂಗ್ ಮಾಡಿ ಯಾವುದೇ ವಿದ್ಯಾರ್ಥಿ ವಿದ್ಯಾಗಮದಿಂದ ಹೊರಗುಳಿಯದಂತೆ ಯೋಜನೆ ತಯಾರಿಸಿ ಅನುಷ್ಟಾನಗೊಳಿಸಲು ಆದೇಶಿಸಿದರು.
ದಾಖಲಾತಿಗೂ ಆದ್ಯತೆ ನೀಡಿ, ಸಿಆರ್ಪಿ,ಬಿಆರ್ಪಿಗಳು ಆಂದೋಲನ ನಡೆಸಲು ತಿಳಿಸಿ,ವಲಸೆ ಮಕ್ಕಳು ಸಹಾ ವಿದ್ಯಾಗಮದಿಂದ ಹೊರಗುಳಿಯದಂತೆ ಎಚ್ಚರವಹಿಸಲು ತಿಳಿಸಿದರು.
ಪಠ್ಯಪುಸ್ತಕ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಿ, ಮಕ್ಕಳಿಗೆ ಮನೆಗೆ ಪುಸ್ತಕ ತಲುಪಿಸಿ, ಪುಸ್ತಕ,ಅಭ್ಯಾಸ ಪುಸ್ತಕ ಪ್ರತಿ ವಿದ್ಯಾರ್ಥಿಗೂ ತಲುಪಿಸಿ, ಬಳಸುತ್ತಿರುವ ಕುರಿತು ಪರಿಶೀಲನೆ ನಡೆಸಿ ಎಂದರು.
ಮಧ್ಯಾಹ್ನ ಉಪಹಾರ ಯೋಜನೆಯಡಿ ಆಹಾರಧಾನ್ಯಗಳನ್ನು ಪೋಷಕರಿಗೆ ಸೂಕ್ತ ರೀತಿಯಲ್ಲಿ ವಿತರಿಸಿ, ವಿದ್ಯಾಗಮಕ್ಕಾಗಿ 2ನೇ ಹಂತದ ಶಾಲಾನುದಾನ ಶೀಘ್ರ ಬಿಡುಗಡೆಯಾಗಲಿದ್ದು, ಈ ಅನುದಾನ ಬಳಸಿಕೊಂಡು ಕಲಿಕೋಪಕರಣ ಸಿದ್ದಪಡಿಸಿಕೊಳ್ಳಲು ತಿಳಿಸಿದರು.
120 ಅವಧಿಗಳನ್ನು ಬೋಧನಾ ಅವಧಿಗಳನ್ನಾಗಿ ನಿರ್ಧರಿಸಿದ್ದು, ಎಲ್ಲ ಪಠ್ಯಪುಸ್ತಕಗಳನ್ನು ಸಂಕ್ಷೀಪ್ತವಾಗಿ ಬೋಧಿಸುವುದು, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ವರ್ಕ್ಶೀಟ್ಗಳನ್ನು ಸಿದ್ದಪಡಿಸಲಾಗಿದ್ದು, ಇದನ್ನು ಎಲ್ಲಾ ವಿಷಯವಾರು ವಿಸ್ತರಿಸಿ ವಿದ್ಯಾರ್ಥಿಗಾಳಿಗೆ ನೀಡಿ ಪರಿಶೀಲನೆ ಮಾಡಲು ತಿಳಿಸಿದರು.
ಪ್ರತಿಶಿಕ್ಷಕರು ಎಷ್ಟು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿದೆ, ಮಾಹಿತಿ ಸಂಗ್ರಹಿಸಿ, ಪ್ರತಿ ಶಿಕ್ಷಕರಿಗೆ ಚೆಕ್ಲೀಸ್ಟ್ ಸಿದ್ದಪಡಿಸಿ ನೀಡಿ, ಅದರಂತೆ ಕಾರ್ಯನಿರ್ವಹಿಸಲು ಮಾರ್ಗದರ್ಶನ ನೀಡಿ ಎಂದರು.
6,7ನೇ ತರಗತಿಗೂ
ಚಂದನದಲ್ಲಿ ತರಗತಿ
ಚಂದನವಾಹಿನಿಯಲ್ಲಿ ಸಂವೇದ ಕಾರ್ಯಕ್ರಮದಲ್ಲಿ 6,7ನೇ ತರಗತಿಯ ಬೋಧನಾಕಾರ್ಯ ಶೀಘ್ರ ಆರಂಭಿಸಲಾಗುವುದು ಎಂದ ಅವರು, 6 ರಿಂದ 10ನೇ ತರಗತಿ ವರೆಗೂ ಆಂಗ್ಲಮಾಧ್ಯಮದಲ್ಲಿ ಬೋಧಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಚಂದನದ ಈ ಕಾರ್ಯಕ್ರಮವನ್ನು ವೀಕ್ಷಿಸಲು ಗ್ರಾ.ಪಂ ಹಂತದಲ್ಲಿ ಟಿವಿ ವ್ಯವಸ್ಥೆ ಮಾಡಿ, ಪ್ರತಿ ವಿದ್ಯಾರ್ಥಿ ವೀಕ್ಷಣೆ ಮಾಡಿದ ಬಗ್ಗೆ ಪರಿಶೀಲನೆ ನಡೆಸಿ ಪ್ರಶ್ನೋತ್ತರ ನೀಡಿ ಕಲಿಕೆಯಲ್ಲಿ ನಿರಂತರತೆ ಕಾಪಾಡಿ ಎಂದು ಸೂಚಿಸಿದರು.
ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆ ಅನುಷ್ಟಾನದಲ್ಲಿ ಮಾಡಿರುವ ಸಾಧನೆಯನ್ನು ವಿವರಿಸಿ, ಮತ್ತಷ್ಟು ಪರಿಣಾಮಕಾರಿಯಾಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಶಿಕ್ಷಕರು ವಿದ್ಯಾಗಮದಡಿ ಮಕ್ಕಳನ್ನು ತಲುಪಿದ ಕುರಿತ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಕಲಿಕಾ ಪ್ರದೇಶಕ್ಕೆ
ಭೇಟಿ-ಪರಿಶೀಲನೆ
ನಗರದ ವಿವಿಧೆಡೆ ಶಿಕ್ಷಕರು ವಿದ್ಯಾಗಮದಡಿ ನಡೆಸುತ್ತಿರುವ ಬೋಧನಾ ಪ್ರದೇಶಗಳಿಗೆ ನೋಡಲ್ ಅಧಿಕಾರಿ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಡಯಟ್, ಬಿಆರ್ಸಿ,ಅಲಮಿನ್ ಶಾಲೆಯಲ್ಲಿ ನಡೆಯುತ್ತಿರುವ ಶಿಕ್ಷಕರ ತರಬೇತಿ ಕಾರ್ಯಾಗಾರಗಳನ್ನೂ ವೀಕ್ಷಿಸಿದರು.
ಸಭೆಯಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕೆ.ಎಸ್.ನಾಗರಾಜಗೌಡ, ಡಿವೈಪಿಸಿ ಮೋಹನ್ ಬಾಬು, ವಿಷಯ ಪರೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ಎವೈಪಿಸಿ ಸಿದ್ದೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ಮತ್ತಿತರರಿದ್ದರು.