ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿ, ಜ್ಞಾನಿಗಳ ಕಥೆ ಹೇಳುವುದರಿಂದ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೆಚ್ಚಲು ಅನುಕೂಲವಾಗುತ್ತದೆ – ಸಿ.ಆರ್. ಭಾಗ್ಯಲಕ್ಷ್ಮಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿ, ಜ್ಞಾನಿಗಳ ಕಥೆ ಹೇಳುವುದರಿಂದ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೆಚ್ಚಲು ಅನುಕೂಲವಾಗುತ್ತದೆ – ಸಿ.ಆರ್. ಭಾಗ್ಯಲಕ್ಷ್ಮಿ

ಕೋಲಾರ ಸೆ.09 : ವಿಜ್ಞಾನದ ಮಹತ್ವ, ಪ್ರಯೋಗ, ಜ್ಞಾನಿಗಳ ಕಥೆ ಹೇಳುವುದರಿಂದ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೆಚ್ಚಲು ಅನುಕೂಲವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಸಿ.ಆರ್. ಭಾಗ್ಯಲಕ್ಷ್ಮಿ ತಿಳಿಸಿದರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ವಡಗೂರು, ಹರಟಿ, ಹುತ್ತೂರು, ಅಬ್ಬಣಿ ಸಮೂಹ ಸಂಪನ್ಮೂಲ ಕೇಂದ್ರಗಳ ವತಿಯಿಂದ ಏರ್ಪಡಿಸಿದ್ದ ವಿಜ್ಞಾನ ಸಮಾಲೋಚನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸುತ್ತಮುತ್ತಲಿನಲ್ಲಿ ನಡೆಯುವ ಅನೇಕ ಪ್ರಾಕೃತಿಕ ಘಟನೆಗಳ ಕಡೆ ಹೆಚ್ಚು ಗಮನ ಹರಿಸಬೇಕು. ಇದರಿಂದ ವಿಜ್ಞಾನ ವಿಷಯ ಕಲಿಕೆಯಲ್ಲಿ ಮಕ್ಕಳಿಗೆ ಉತ್ಸಾಹ ಹೆಚ್ಚುತ್ತದೆ. ಅದೇ ರೀತಿ ಪ್ರಾಕೃತಿಕ ಘಟನೆಗಳನ್ನು ಕುತೂಹಲದಿಂದ ವೀಕ್ಷಿಸುವ ನಾನಾ ಸಂದೇಹಗಳಿಗೆ ಉತ್ತರ ಕಂಡುಕೊಳ್ಳುವ ಮನೋಭಾವವನ್ನು ಮಕ್ಕಳಲ್ಲಿ ಶಿಕ್ಷಕರು ಬೆಳೆಸುವುದೂ ಮುಖ್ಯ ಎಂದರು.
ಸಿ.ವಿ.ರಾಮನ್, ಥಾಮಸ್ ಅಲ್ವ ಎಡಿಸನ್, ಮೇರಿ ಕ್ಯೂರಿ, ಪಿಯರಿ ಕ್ಯೂರಿ ಮುಂತಾದ ವಿಜ್ಞಾನಗಳ ಕಥೆ ಹೇಳಿದರಲ್ಲದೆ ನಿತ್ಯ ಜೀವನದಲ್ಲಿ ವಿಜ್ಞಾನದ ಮಹತ್ವವೇನು ಎಂದು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿಯುವಂತೆ ಜಾಗೃತಿ ಉಂಟು ಮಾಡಬೇಕು ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ವಿಜ್ಞಾನ ಕಬ್ಬಿಣದ ಕಡಲೆ ಆಗದಿರಬೇಕಾದರೆ ಸಮಾಲೋಚನೆ, ತರಬೇತಿಗಳಲ್ಲಿ ಕಲಿತ ಪ್ರಾಯೋಗಿಕ ಪಾಠ ಮತ್ತು ಪ್ರಯೋಗಗಳನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದರು.
ಮುಖ್ಯೋಪಾದ್ಯಾಯರಾದ ಚೌಡಮ್ಮ, ಜಗನ್ನಾಥ್, ರಾಜೇಂದ್ರ, ಸೊಣ್ಣೇಗೌಡ, ಬಿ.ಎಂ.ಮಂಜುನಾಥ್, ವಿ.ಕೆ. ಗಾಯತ್ರಿ ಸೇರಿದಂತೆ ಹೋಬಳಿ ಶಾಲೆಗಳ ಎಲ್ಲಾ ಮುಖ್ಯ ಶಿಕ್ಷಕರು, ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದ ಸಮಾರಂಭದಲ್ಲಿ ಹರಟಿ ಸಿ.ಆರ್.ಪಿ. ಗಂಗಾಧರ್ ಸ್ವಾಗತಿಸಿ, ವಡಗೂರು ಸಿ.ಆರ್.ಪಿ. ಸುಜಾತ ನಿರೂಪಿಸಿ, ಹುತ್ತೂರು ಸಿ.ಆರ್.ಪಿ. ಮಂಜುನಾಥ್ ವಂದಿಸಿದರು.