ರೋಣೂರು ಗ್ರಾಮದ ಬೀದಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಸ ಗುಡಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ರೋಣೂರು ಗ್ರಾಮದ ಬೀದಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಸ ಗುಡಿಸಿದರು.

 

ಶ್ರೀನಿವಾಸಪುರ: ಸಮಾಜದ ಎಲ್ಲ ವರ್ಗದ ಜನರೂ. ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಮುಂದೆ ಬರಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

  ತಾಲ್ಲೂಕಿನ ರೋಣೂರೂ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ  ಏರ್ಪಡಿಸಿದ್ದ  ಸ್ವಚ್ಛತಾ ಪಾದ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಕ್ಷೇತ್ರದಲ್ಲಿ 150 ಕಿ.ಮೀ ಪಾದ ಯಾತ್ರೆ ನಡೆಸಿ ಜನರಲ್ಲಿ ಸ್ವಚ್ಛತೆ ಮಹತ್ವ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

  ಪರಿಸರ ಮಾಲೀನ್ಯ ತಡೆಗೆ ಗಿಡ, ಮರಗಳನ್ನು ಬೆಳೆಸಬೇಕು. ಪ್ರಾಣಿ, ಪಕ್ಷಿಗಳ ಹಸಿವು ನೀಗಲು ಪೂರಕವಾಗಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಬೇಕು. ಜಲ ಮೂಲಗಳು ಮಾಲೀನ್ಯಗೊಳ್ಳುವುದನ್ನು ತಡೆಯಬೇಕು. ಕೆರೆ. ಕಾಲುವೆ ಒತ್ತುವರಿ ಮಾಡಿಕೊಂಡಿರುವವರು ಸಮಾಜದ ಹಿತದೃಷ್ಟಿಯಿಂದ ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಡಬೇಕು. ಸಾಲು ಮರದ ತಿಮ್ಮಕ್ಕನ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

    ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಹಾಗೂ ಫಸಲ್‌ ಬಿಮಾ ಯೋಜನೆ ಸಾರ್ವಜನಿಕರ ಆರೋಗ್ಯ ಹಾಗೂ ರೈತರ ಹಿತದೃಷ್ಟಿಯಿಂದ ವರದಾನವಾಗಿದೆ. ಇದು ಪ್ರಧಾನಿ ಮೋದಿ ಅವರ ಕೊಡುಗೆಯಾಗಿದೆ. ಕ್ಷೇತ್ರದ ಮಾಜಿ ಸಂಸದರು ಏಳು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದರೂ, ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರೈಲ್ವೆ ಕಾರ್ಯಾಗಾರ ಸ್ಪಾಪಿಸಲಾಗುವುದು ಎಂದು ಹೇಳಿದರು.

  ಕೋಲಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಅಗತ್ಯ ಸಂಖ್ಯೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

  ಬಿಜೆಪಿ ಮುಖಂಡರಾದ ಡಾ.ಕೆ.ಎನ್‌.ವೇಣುಗೋಪಾಲ್‌, ವೆಂಕಟೇಗೌಡ, ಜಯರಾಮರೆಡ್ಡಿ, ಇ.ಶಿವಣ್ಣ, ಎಂ.ಲಕ್ಷ್ಮಣಗೌಡ, ನಾರಾಯಣಸ್ವಾಮಿ, ಚಲಪತಿ,  ಪದ್ಮನಾಭ್‌, ರಾಮಾಂಜಿ, ಸುನಿಲ್‌, ಶೇಕ್ ಷಫಿವುಲ್ಲಾ, ನಾಗರಾಜ್‌, ಸುಧಾಕರ್‌ ಇದ್ದರು.