ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:- ಬೆಂಗಳೂರು ಉತ್ತರ ವಿವಿಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿನಿಯರನ್ನು ಒಳಗೊಂಡ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸಮಸ್ಯೆಗಳಿಗೆ ತಾಳ್ಮೆಯಿಂದ ಸ್ಪಂದಿಸಿ ಸಮಸ್ಯೆ ಪರಿಹರಿಸುತ್ತಿದ್ದ ಸಜ್ಜನ ಅಧೀಕ್ಷಕ ಗೋಪಿನಾಥ್ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗಾಧರರಾವ್ ಶ್ಲಾಘಿಸಿದರು.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸತತ 36 ವರ್ಷಗಳ ಸೇವೆಯ ನಂತರ ಇಂದು ನಿವೃತ್ತರಾದ ಸರ್ಕಾರಿ ಮಹಿಳಾ ಕಾಲೇಜಿನ ಅಧೀಕ್ಷಕ ಗೋಪಿನಾಥ್ಅವರನ್ನು ಕಾಲೇಜಿನ ಉಪನ್ಯಾಸಕರ ಸಂಘ ಹಾಗೂ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಸುಮಾರು 3600 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ದೊಡ್ಡ ಕಾಲೇಜು, ಇಲ್ಲಿ ಅಂಕಪಟ್ಟಿ, ದಾಖಲಾತಿ, ತಿದ್ದುಪಡಿಗಳು ಮತ್ತಿತರ ಅನೇಕ ಸಮಸ್ಯೆಗಳು ಇಲ್ಲದಿಲ್ಲ, ಅಂತಹ ಸಮಸ್ಯೆಗಳೊಂದಿಗೆ ಬರುವ ವಿದ್ಯಾರ್ಥಿನಿಯರು,ಪೋಷಕರೊಂದಿಗೆ ಸಂಯಮದಿಂದ ವರ್ತಿಸಿ ಪರಿಹರಿಸುತ್ತಿದ್ದ ಅಧೀಕ್ಷಕ ಗೋಪಿನಾಥ್ ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿ.ಆರ್.ಅಶ್ವಥ್ಥ್, ಅಧ್ಯಾಪಕರು,ಸಿಬ್ಬಂದಿ,ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಗೋಪಿನಾಥ್, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ರೀತಿ, ಸಂಯಮದಿಂದ ಆಲಿಸುತ್ತಿದ್ದ ಪರಿ ನಿಜಕ್ಕೂ ಆದರ್ಶ ಎಂದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಗೋಪಿನಾಥ್, ತಾವು 36 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಅಧ್ಯಾಪಕರು,ಸಿಬ್ಬಂದಿ,ಪ್ರಾಂಶುಪಾಲರ ಜತೆ ಕೆಲಸ ಮಾಡಿದ್ದೇನೆ, ಪ್ರತಿ ಹಂತದಲ್ಲೂ ಎಲ್ಲರೂ ಸಹಕಾರ ನೀಡಿದ್ದಾರೆ, ಅದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎಲ್ಲರೊಂದಿಗೂ ಸ್ನೇಹದಿಂದ ಇರಲು ಬಯಸಿದ್ದೇನೆ, ನನ್ನ ಕರ್ತವ್ಯದ ಅವಧಿಯಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಅವರು, ತಪ್ಪು ಮಾಡಿಲ್ಲ ಎಂಬ ಆತ್ಮತೃಪ್ತಿ ನನಗಿದೆ ಎಂದು ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅಪಾರ ಅನುಭವ ಹೊಂದಿರುವ ಅವರು ನಿವೃತ್ತಿ ನಂತವೂ ತಮ್ಮ ಅನುಭವವನ್ನು ಹಂಚಿಕೊಳ್ಳಲಿ ಎಂದು ಸಲಹೆ ನೀಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾಲೇಜಿನಿಂದ ಗೋಪಿನಾಥ್ ಹಾಗೂ ಪತ್ನಿ ಜಿ.ಎಸ್.ಕಲಾವತಿ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಮಕ್ಕಳಾದ ಭರತ್, ಚಂದನಾ ತಮ್ಮ ತಂದೆಯ ಬೀಳ್ಕೊಡುಗೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಪ್ರೊ.ವಿಜಯಕುಮಾರ್, ಜನಾರ್ಧನ್, ಸೀನಪ್ಪ, ಹೆಚ್.ಆರ್.ಮಂಜುನಾಥ್, ಸುನೀಲ್ ಬೃಂದಾದೇವಿ, ಹೇಮಮಾಲಿನಿ, ರವೀಂದ್ರ ಮತ್ತಿತರರಿದ್ದರು.