ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ-ಪೋಷಕರ ಆತಂಕ 250 ದೂರವಾಣಿ ಕರೆ-ಪರೀಕ್ಷೆ ಯಾವಾಗ ಎಂಬುದೇ ಪ್ರಶ್ನೆ – ರತ್ನಯ್ಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ-ಪೋಷಕರ ಆತಂಕ 250 ದೂರವಾಣಿ ಕರೆ-ಪರೀಕ್ಷೆ ಯಾವಾಗ ಎಂಬುದೇ ಪ್ರಶ್ನೆ – ರತ್ನಯ್ಯ
ಕೋಲಾರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಮಾಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪರೀಕ್ಷಾ ದಿನಾಂಕ ಪ್ರಕಟಗೊಳ್ಳದ ಕಾರಣ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಹಲವು ಪೋಷಕರು ಆತಂಕ ವ್ಯಕ್ತಪಡಿಸಿದರು ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು.ನಗರದ ಡಿಡಿಪಿಐ ಕಚೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಗುರುವಾರ 250ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿದ್ದು, ಹಲವು ಪೋಷಕರು ಪರೀಕ್ಷೆಗೆ ನಿಖರ ದಿನಾಂಕ ತಿಳಿಸಿ ಎಂದು ಮನವಿ ಮಾಡಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಜತೆಗೆ ಪರೀಕ್ಷೆ ಯಾವಾಗ, ಪ್ರವೇಶ ಪತ್ರ ಎಂದು ನೀಡುತ್ತೀರಾ ಎಂದು ಪ್ರಶ್ನಿಸಿದರು.ಮಕ್ಕಳು ಮತ್ತು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದ ಡಿಡಿಪಿಐ ರತ್ನಯ್ಯ, ಪರೀಕ್ಷೆ ಕುರಿತು ಆತಂಕ ಬೇಡ, ಖಂಡಿತಾ ಪರೀಕ್ಷೆ ನಡೆಯುತ್ತದೆ, ದಿನಾಂಕ ಶೀಘ್ರವಾಗಿ ಪ್ರಕಟಿಸಲಾಗುವುದು ಮತ್ತು ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಮಕ್ಕಳಿಗೆ ಹೊಸ ಪ್ರವೇಶ ಪತ್ರವನ್ನು ಆಯಾ ಶಾಲೆಯಲ್ಲಿ ವಿತರಿಸಲಾಗುವುದು ಎಂದರು.ಪರೀಕ್ಷಾ ಕೊಠಡಿಯಲ್ಲಿ ಒಂದು ಮೀಟರ್ ಅಂತರ ಕೊಟ್ಟು ಮಕ್ಕಳನ್ನು ಕೂರಿಸಲಾಗುತ್ತದೆ, ಇಲಾಖೆ ಕೊರೋನಾ ಹರಡುವಿಕೆ ತಡೆಗೆ ಎಲ್ಲಾ ಮುಂಜಾಗ್ರತೆ ಕೈಗೊಳ್ಳಲಿದೆ ಎಂದು ಪೋಷಕರ ಆತಂಕ ನಿವಾರಿಸಿದರು.
ಮೇ.20 ರಂದುಪೋನ್ ಇನ್ ಕಾರ್ಯಕ್ರಮ.
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿರಂತರವಾಗಿ ಮಕ್ಕಳೊಂದಿಗೆ ಸಂಪರ್ಕದಲ್ಲಿರುವ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.ಮಕ್ಕಳಿಗೆ ಇನ್ನೂ ಸಮಸ್ಯೆಗಳಿದ್ದರೆ ಮೇ.20 ರಂದು ಮತ್ತೆ ಫೋನ್ ಇನ್ ಕಾರ್ಯಕ್ರಮ ನಡೆಸುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದು, ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ ಎಂದರು.
ಈ ಬಾರಿ ಮಕ್ಕಳು 250ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದು, ಅದರಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ 10 ಪ್ರಶ್ನೆ, ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದಂತೆ 13 ಉರ್ದು ವಿಷಯಕ್ಕೆ 3 ಪ್ರಶ್ನೆ, ಹಿಂದಿ ವಿಷಯಕ್ಕೆ 13 ಪ್ರಶ್ನೆ, ಗಣಿತಕ್ಕೆ ಸಂಬಂಧಿಸಿದಂತೆ 25 ಪ್ರಶ್ನೆ, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 20 ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 30 ಪ್ರಶ್ನೆಗಳನ್ನು ಕೇಳಲಾಗಿದೆ ಎಂದರು.ಜತೆಗೆ ಪರೀಕ್ಷೆ ದಿನಾಂಕ,ಪ್ರವೇಶಪತ್ರದಲ್ಲಿ ದಿನಾಂಕಗಳ ಬದಲಾವಣೆ, ಪ್ರವೇಶ ಪತ್ರ ಯಾವಾಗ ನೀಡುತ್ತೀರಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ 40 ಪ್ರಶ್ನೆಗಳನ್ನು ಮಕ್ಕಳು ಕೇಳಿ ಉತ್ತರ ಪಡೆದುಕೊಂಡಿದ್ದಾಗಿ ವಿವರಿಸಿದರು.
ಕೆಲವು ಮಕ್ಕಳು 3 ಮತ್ತು 4 ಅಂಕಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು, ಕನ್ನಡದಲ್ಲಿ ಸಂದರ್ಭಕ್ಕೆ ಹೇಗೆ ಉತ್ತರ ನೀಡಬೇಕು ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.ಗಣಿತದಲ್ಲಿ ತ್ರಿಕೋನಮಿತಿ, ಸಮಾನಂತರ ಶ್ರೇಣಿ, ಘನಾಕೃತಿಗಳ ಮೇಲ್ಮೈ ವಿಸ್ತೀರ್ಣ ಈ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಶ್ನೆಗಳನ್ನು ಮಕ್ಕಳು ಕೇಳಿ ಉತ್ತರ ಪಡೆದುಕೊಂಡರು.ಪೋನ್ ಇನ್ ಕಾರ್ಯಕ್ರಮದಲ್ಲಿ ವಿಷಯವಾರು ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಅನಂತಪದ್ಮನಾಭ್,ಬಿ.ಎ.ಕವಿತಾ, ಬಿ.ಕೆ.ನಾಗರಾಜ್, ಆರ್.ಚೈತ್ರಾ, ನಾರಾಯಣಸ್ವಾಮಿ, ನರಸಿಂಹಪ್ರಸಾದ್, ಶ್ರೀನಿವಾಸಗೌಡ, ಬಸವರಾಜ್, ಶೋಭಾ, ಅನ್ವರ್ ಪಾಷ ಉತ್ತರಿಸಿ ಆತಂಕ ನಿವಾರಿಸಿದರು.
ಪರೀಕ್ಷಾ ಸಿದ್ದತೆ,ವೇಳಾಪಟ್ಟಿ ಮತ್ತಿತರ ಸಮಸ್ಯೆಗಳಿಗೆ ಡಿಡಿಪಿಐ ಕೆ.ರತ್ನಯ್ಯ,ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ ಉತ್ತರಿಸಿದ್ದು, ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ,ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ಮತ್ತಿತರರಿದ್ದರು.