ಬೀಜಾಡಿ:ಬೃಹತ್ ಆಧಾರ್ ನೋಂದಾವಣೆ,ತಿದ್ದುಪಡಿ ಶಿಬಿರ

JANANUDI.COM NETWORK

 

 

 

ಬೀಜಾಡಿ:ಬೃಹತ್ ಆಧಾರ್ ನೋಂದಾವಣೆ,ತಿದ್ದುಪಡಿ ಶಿಬಿರ

 

 

ಬೀಜಾಡಿ,ಜ.12: ಆಧಾರ್ ಕಾರ್ಡ್ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದು, ಈ ಸೇವೆಯನ್ನು ಜನರಿಗೆ ಅತ್ಯಂತ ಸಮೀಪದಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಿತ್ರಸಂಗಮ ಮಾಡಿದೆ.ಅಂಚೆ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಬಿರದ ಯಶಸ್ವಿಗೆ ದುಡಿಯುತ್ತಿದ್ದಾರೆ ಎಂದು ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ಜಿ.ದೇವಾಡಿಗ ಹೇಳಿದರು.
ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಮಿತ್ರ ಸಂಗಮ ಬೀಜಾಡಿ-ಗೋಪಾಡಿ, ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಆಶ್ರಯದಲ್ಲಿ ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ, ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಇವರ ಸಹಯೋಗದಲ್ಲಿ ನಡೆದ ಬೃಹತ್ ಆಧಾರ್ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರವನ್ನು ಬೀಜಾಡಿ ಮಿತ್ರಸೌಧದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ ಮೊದಲಾದ ಸೌಲಭ್ಯಗಳ ಮೂಲಕ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕು ವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಅಧ್ಯಕ್ಷ ರಾಜು ಪೂಜಾರಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಿಬಿರದ ಯಶಸ್ವಿಗೆ ಸಹಕರಿಸಿದ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ಜಿ.ದೇವಾಡಿಗ, ಕೋಟೇಶ್ವರ ಅಂಚೆ ಕಚೇರಿಯ ಅಂಚೆಪಾಲಕಿ ಪೂರ್ಣಿಮಾ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು.ಶಿಬಿರದಲ್ಲಿ ಸ್ವಯಂ ಸೇವಕರಾಗಿ ದುಡಿದ ಕೋಟೇಶ್ವರ ವರದರಾಜ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಮಾಯ,ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇದರ ಕಾರ್ಯದರ್ಶಿ ರಾಜೇಶ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು. ಅಧ್ಯಕ್ಷ ಮಂಜುನಾಥ ವಂದಿಸಿದರು. ರೋಟರಿ ಸಮುದಾಯ ದಳದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

 

ದಾಖಲೆಯಾದ ಆಧಾರ್ ನೊಂದಣೆ
ಈ ಶಿಬಿರದಲ್ಲಿ 11 ಆಧಾರ್ ಯುನಿಟ್‍ಗಳನ್ನು ಅಂಚೆ ಇಲಾಖೆ ಒದಗಿಸಿದ್ದು, 10 ಅಂಚೆ ಸಹಾಯಕರು ನೂರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ನೋಂದಣೆ ಮತ್ತು ತಿದ್ದುಪಡಿಯನ್ನು ಯಶಸ್ವಿಯಾಗಿ ಮಾಡಿ 1239 ದಾಖಲೆ ಸಂಖ್ಯೆಯ ಜನರು ಈ ಶಿಬಿರದ ಪ್ರಯೋಜನವನ್ನು ಪಡೆದರು. ಜತೆಗೆ ಭಾರತೀಯ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ, ಸಾರ್ವಜನಿಕ ಭವಿಷ್ಯ ನಿಧಿ, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನ ಮೊಬೈಲ್ ಬ್ಯಾಂಕಿಂಗ್ ಸಹಿತ ಮೊದಲಾದ ಸೇವೆಯನ್ನು ಸ್ಥಳದಲ್ಲಿ ತೆರೆಯುವ ವ್ಯವಸ್ಥೆ ಮಾಡಿದ್ದ ಕಾರಣ 250ಕ್ಕೂ ಹೆಚ್ಚಿನ ಜನರು ಇದರ ಪ್ರಯೋಜನವನ್ನು ಪಡೆದುಕೊಂಡರು