ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಸುದೀರ್ಘ ಸೇವೆಯ ನಂತರ ನಿವೃತ್ತರಾದ ನೌಕರರ ವಿಶ್ರಾಂತಿ ಜೀವನದಲ್ಲಿ ಅವರಿಗೆ ನೀಡುವ ಪಿಂಚಣಿಯಲ್ಲಿ ವ್ಯತ್ಯಾಸವಾಗದಂತೆ ಕ್ರಮವಹಿಸುವ ಅಗತ್ಯವಿದೆ, ಬ್ಯಾಂಕುಗಳಿಂದ ಆಗುತ್ತಿರುವ ತೊಂದರೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕಿ ಎನ್.ರುಕ್ಮಣಿದೇವಿ ತಿಳಿಸಿದರು.
ನಗರದ ಡಿಐಸಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಖಜಾನೆ ವತಿಯಿಂದ ನಡೆದ ಪಿಂಚಣಿ ಅದಾಲತ್ನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಂಚಣಿದಾರರ ಕುಂದುಕೊರತೆಗಳ ಕುರಿತು, ಬ್ಯಾಂಕ್ವತಿಯಿಂದ ಹೆಚ್ಚುವರಿ ಅಥವಾ ಕಡಿಮೆ ಪಾವತಿಸಿರುವುದು, ಮುಂತಾದ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲ ಮಹತ್ತರ ನಿರ್ಣಯಗಳನ್ನು ಕೈಗೊಂಡಿದೆ ಎಂದರು.
ಪಿಂಚಣಿದಾರರ ಎಲ್ಲಾ ಮಾಹಿತಿಯನ್ನು ಖಜಾನೆ-2ರಲ್ಲಿ ಕ್ರೋಢೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಡಿಮೆ ಅಥವಾ ಹೆಚ್ಚುವರಿಯಾಗಿ ಪಾವತಿಸಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಆದೇಶಗಳನ್ನು ಹೊರಡಿಸಿದೆ. ಅದರಂತೆ ಖಜಾನೆಯಲ್ಲಿ ಹಂತಹಂತವಾಗಿ ಗಣಕೀಕರಣದ ಕಾರ್ಯವು ನಡೆಯುತ್ತಿದೆ. ಇದರಿಂದ ಪಿಂಚಣಿದಾರರ ಹಲವಾರು ತೊಂದರೆಗಳು ನಿವಾರಣೆ ಆಗುತ್ತದೆ ಎಂದು ಭರವಸೆ ನೀಡಿದರು.
ರಿಸರ್ವ್ ಬ್ಯಾಂಕ್ ಸೂಚನೆ ಮತ್ತು ಮಾರ್ಗಸೂಚಿಗಳನ್ವಯ ಬ್ಯಾಂಕ್ಗಳು ಪಿಂಚಣಿದಾರರಿಗೆ ಉತ್ತಮ ಹಾಗೂ ಆಧ್ಯತೆ ಮೇರೆಗೆ ಸೇವೆ ನೀಡಬೇಕಾಗುತ್ತದೆ. ಪಿಂಚಣಿದಾರರಿಗೆ ಪ್ರತ್ಯೇಕವಾದ ಪಿಂಚಣಿ ಖಾತೆಗಳನ್ನು ತೆರೆಯಲು ಹಾಗೂ ಇದರ ಬಗ್ಗೆ ಪ್ರಚಾರ ಮಾಡಲು ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಾರ್ವಜನಿಕ ಸೇವೆ ಮಾಡಿ ನಿವೃತ್ತರಾದವರಿಗೆ ಅವರ ನಿವೃತ್ತ ಜೀವನದಲ್ಲಿ ತೊಂದರೆ ನೀಡುವುದು ಸರಿಯಲ್ಲ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ, ಬ್ಯಾಂಕ್ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಬಾರದು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ, ನಿವೃತ್ತರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ, ಇದನ್ನು ಯಶಸ್ವಿಗೊಳಿಸಿ ಹಾರೈಸಿ ಪಿಂಚಣಿದಾರರಿಗೆ ಒಳ್ಳಯ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು
ಪಿಂಚಣಿದಾರರ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷ ದೇವೀರಪ್ಪ, ಪಿಂಚಣಿದಾರರಿಗೆ ಬ್ಯಾಂಕುಗಳಿಂದ ಸಮರ್ಪಕ ಸೇವೆ ಸಿಗುತ್ತಿಲ್ಲ, ಕಾಲಕಾಲಕ್ಕೆ ಪಿಂಚಣಿ ಬಟವಾಡೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ದೂರಿ, ಬ್ಯಾಂಕುಗಳ ಪಿಂಚಣಿದಾರರ ಕುರಿತಾದ ನಿರ್ಲಕ್ಷ್ಯ ಧೋರಣೆ ಬದಲಿಸಬೇಕು ಎಂದು ಆಗ್ರಹಿಸಿದರು.
ಬಂಗಾರಪೇಟೆ ತಾಲ್ಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಪೆರುಮಾಳ್, ಬ್ಯಾಂಕ್ಗಳಿಗೆ ನಿವೃತ್ತಿದಾರರು ಹೋದಾಗ ಸರಿಯಾದ ಸೇವೆ ಸಿಗುತ್ತಿಲ್ಲ, ಬ್ಯಾಂಕ್ನವರಿಗೆ ಸ್ಥಳೀಯ ಭಾಷೆ ಗೊತ್ತಿಲ್ಲ, ಪಿಂಚಣಿದಾರರಿಗೆ ಪ್ರತ್ಯೇಕ ಸೇವಾ ಕೌಂಟರ್ಗಳನ್ನು ನೀಡುವ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಪ್ಪತ್ತು ವಯಸ್ಸಿನ ಪಿಂಚಣಿದಾರರಿಗೆ ಲೋನ್ ಸೌಲಭ್ಯವಿಲ್ಲ, ಕ್ಯೂನಲ್ಲಿ ಹಾಗೂ ಪಿಂಚಣಿ ಪಡೆಯಲು ಸಹ ಸಾಲಿನಲ್ಲಿ ನಿಲ್ಲಬೇಕು, ಆದುದರಿಂದ ವಯಸ್ಕರ ಸಲುವಾಗಿ ಪ್ರತ್ಯೇಕ ಸಾಲು ಹಾಗೂ ಕೌಂಟರ್ಗಳನ್ನು ಬ್ಯಾಂಕುಗಳಲ್ಲಿ ಸೌಲಭ್ಯ ಮಾಡಬೇಕಾಗಿ ಕೋರಿದರು.
ಸಹಾಯಕ ಖಜಾನಾಧಿಕಾರಿಗಳಾದ ಜೀವನ್, ಟಿ.ಎಂ.ನಾರಾಯಣರಾವ್ ಮಾತನಾಡಿ, ಪಿಂಚಣಿದರರಿಗೆ ಕುಂದುಕೊರತೆಗಳನ್ನು ನಿವಾರಿಸುವ ಪಿಂಚಣಿ ಅದಾಲತ್ ಅವಶ್ಯ ಮತ್ತು ಬ್ಯಾಂಕ್ನಿಂದ ಪಿಂಚಣಿದಾರರ ದಾಖಲೆ ಬಂದಾಗ ವಿಳಂಬ ಮಾಡದೇ ಕಳುಹಿಸಲು ಕ್ರಮವಹಿಸಬೇಕು ಎಂದು ಕೋರಿದರು.
ಮುಳಬಾಗಿಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಅಧಿಕಾರಿಗಳು ಮಾತನಾಡಿ, ನಿವೃತ್ತದಾರರಿಗೆ ಎಲ್ಲಾ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು ಹಾಗೂ ಸಿಬ್ಬಂದಿಯ ಕೊರತೆಯಿಂದ ಸೇವೆಯನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಖಜಾನೆ ಸಿಬ್ಬಂದಿ ಪ್ರಭಾಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಖಜಾನೆ ಸಹಾಯಕ ಖಜಾನಾಧಿಕಾರಿ ಚೈತ್ರ, ಖಜಾನೆಯ ಆರ್.ಅಶೋಕ್ ಕುಮಾರ್, ನಟೇಶ್, ಬ್ರಹ್ಮ, ಪಿಂಚಣಿದಾರರ ಸಂಘದ ಉಪಾಧ್ಯಕ್ಷ ನಾಗರಾಜ್ ಮತ್ತು ಪಿಂಚಣಿದಾರರು ಉಪಸ್ಥಿತರಿದ್ದರು.