ನ್ಯಾಯಾಲಯದಲ್ಲಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ವಿರುದ್ಧ ಮಾನಹಾನಿ ಮೊಕ್ದಮೆ ದಾಖಲಿಸಿದ ಬಳಿಕ, ನ್ಯಾಯಾಲಯದ ಹೊರಗೆ ಹೈಕೋರ್ಟ್‌ ವಕೀಲ ಎ.ಶಂಕರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಇದ್ದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನ್ಯಾಯಾಲಯದಲ್ಲಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ವಿರುದ್ಧ ಮಾನಹಾನಿ ಮೊಕ್ದಮೆ ದಾಖಲಿಸಿದ ಬಳಿಕ, ನ್ಯಾಯಾಲಯದ ಹೊರಗೆ ಹೈಕೋರ್ಟ್‌ ವಕೀಲ ಎ.ಶಂಕರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಇದ್ದರು.
ಶ್ರೀನಿವಾಸಪುರ: ಇಲ್ಲಿನ ನ್ಯಾಯಾಲಯದಲ್ಲಿ  ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರು, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ವಿರುದ್ಧ ಮಾನ ಹಾನಿ ಮೊಕದ್ದಮೆ ದಾಖಲಿಸಿದರು.
  ಮೊಕದ್ದಮೆ ದಾಖಲಿಸಿದ ಬಳಿಕ  ನ್ಯಾಯಾಲಯದ ಹೊರಗೆ ಹೈಕೋರ್ಟ್‌ ವಕೀಲ ಎ.ಶಂಕರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಹಾಗೂ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಉತ್ತಮ ವ್ಯಕ್ತಿತ್ವ ಹಾಗೂ ಪ್ರಬುದ್ಧತೆ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂಥ ವ್ಯಕ್ತಿಯ ವಿರುದ್ಧ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಧಾರ ರಹಿತ ಆಪಾದನೆ ಮಾಡುವುದರ ಮೂಲಕ ಅವರ ಮಾನ ಹಾನಿ ಮಾಡಿದ್ದಾರೆ ಎಂದು ಹೇಳಿದರು.
  ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಕೆ.ಆರ್‌.ರಮೇಶ್‌ ಕುಮಾರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವುದೇ ಪ್ರವೃತ್ತಿಯಾದಂತಿದೆ. ರಮೇಶ್‌ ಕುಮಾರ್‌ ಅವರಿಗೆ ರಾಜಕೀಯವಾಗಿ ಉತ್ತಮ ಸ್ಥಾನಮಾನ ಸಿಗುವ ಸಂದರ್ಭದಲ್ಲಿಯೇ,  ಇಲ್ಲ ಸಲ್ಲದ ಆಪಾದನೆ ಮಾಡಿ, ಆ ಸ್ಥಾನ ಸಿಗದಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿ ಮಾಡಿ ತಲೆ ಬುಡವಿಲ್ಲದ ಆಪಾದನೆ ಮಾಡಿದ್ದಾರೆ. ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆಯಂಥ ಆಪಾದನೆ ಮಾಡಿರುವುದರಿಂದ ರಮೇಶ್‌ ಕುಮಾರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ.
  ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಮಾಡಿರುವ ಆಧಾರ ರಹಿತ ಆಪಾದನೆಗಳಿಂದ ಮತದಾರರು ಹಾಗೂ ಸಾರ್ವಜನಿಕರು ರಮೇಶ್‌ ಕುಮಾರ್‌ ಅವರನ್ನು ಸಂಶಯದಿಂದ ನೋಡುವಂತಾಗಿದೆ. ಅವರು ತಮ್ಮ ಮಡದಿ ಮಕ್ಕಳಿಗೆ ಮುಖ ತೋರಿಸಲು ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ರೆಡ್ಡಿ ಅವರು ತಮ್ಮ ಆಪಾದನೆಗಳ ಮೂಲಕ ಜೀವಾವಧಿ ಶಿಕ್ಷೆ ಕೊಡಲು ಯೋಗ್ಯವಾದ ಅಪರಾಧ ಮಾಡಿದ್ದಾರೆ ಎಂದು ಹೇಳಿದರು.
    ಹೈಕೋರ್ಟ್‌ ವಕೀಲ ಶ್ಯಾಮ್‌ ಸುಂದರ್‌, ಮುಖಂಡರಾದ ದಿಂಬಾಲ ಅಶೋಕ್‌, ಎನ್‌.ರಾಜೇಂದ್ರ ಪ್ರಸಾದ್‌, ಕೆ.ಕೆ.ಮಂಜುನಾಥರೆಡ್ಡಿ, ನರೇಶ್‌, ರಮೇಶ್‌ ಮತ್ತಿತರರು ಇದ್ದರು.