ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನಗರಸಭೆ-ಕಾಂಗ್ರೆಸ್ ಜಯಭೇರಿ-ಕೆ.ಎಚ್.ಮುನಿಯಪ್ಪ ತುರ್ತುಕಾರ್ಯದಿಂದ ಮತಚಲಾಯಿಸಲಾಗಲಿಲ್ಲ-ಸ್ವಷ್ಟನೆ
ಕೋಲಾರ:- ಜಿಲ್ಲೆಯ ಮೂರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆಯೆಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂರು ನಗರಸಭೆಯ ಪ್ರಚಾರ ಕಾರ್ಯದಲ್ಲಿ ತಾವು ನಿರಂತರವಾಗಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಪಕ್ಷವು ಸ್ಪಷ್ಟವಾದ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎನ್ನುವುದು ಮತದಾರರ ಇಂಗಿತದಿಂದ ದೃಢಪಟ್ಟಿದೆ ಎಂದು ವಿವರಿಸಿದ್ದಾರೆ.
ಕೋಲಾರದ ಅಭಿವೃದ್ದಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂಬ ಸತ್ಯ ಮತದಾರರಿಗೆ ತಿಳಿದಿದ್ದು, ಈ ಬಾರಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳ ಕೈಹಿಡಿದಿದ್ದಾರೆ, ನಗರಸಭೆಗಳ ಅಧಿಕಾರ ಪಕ್ಷದ ಹಿಡಿತಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಕೋಲಾರ,ಕೆಜಿಎಫ್,ಮುಳಬಾಗಿಲು ಈ ಮೂರುಕಡೆಗಳಲ್ಲಿ ಇಂದು ಮತದಾನವಾಗಿದ್ದು, ಜನತೆ ಕಾಂಗ್ರೆಸ್ ಪರ ನಿಂತಿದ್ದಾರೆ, ಬಿಜೆಪಿ,ಜೆಡಿಎಸ್‍ನವರು ಏನೇ ಹೇಳಿಕೊಂಡರೂ ಅಧಿಕಾರಕ್ಕೇರುವುದು ಕಾಂಗ್ರೆಸ್ಸೇ ಎಂದರು.
ತುರ್ತು ಕಾರ್ಯ
ಮತದಾನ ಮಾಡಲಿಲ್ಲ
ನಗರಸಭೆಯ ಹಾರೋಹಳ್ಳಿಯ ಮತಗಟ್ಟೆಯಲ್ಲಿ ತಮ್ಮ ಪತ್ನಿ ನಾಗರತ್ನಮ್ಮ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಮತಚಲಾಯಿಸಿದ್ದಾರೆ. ತುರ್ತು ಕಾರ್ಯನಿಮಿತ್ತ ತೆರಳಿದ್ದು, ತಾವು ಮತದಾನ ಮಾಡಲು ಬರುವುದರೊಳಗಾಗಿ ಕಾಲಾವಧಿ ಮೀರಿ ಹೋಗಿದ್ದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ. ಇದಕ್ಕಾಗಿ ತಾವು ವಿಷಾದಿಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನು ಹೊರತು ಪಡಿಸಿ ತಾವು ಯಾವುದೇ ಸಂದರ್ಭದಲ್ಲಿ ಸಂವಿಧಾನಬದ್ಧ ಹಕ್ಕಾದ ಮತದಾನದಿಂದ ದೂರ ಉಳಿದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.