ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ; ಕಸ ಮುಕ್ತ ನಗರ, ಪ್ಲಾಸ್ಟಿಕ್ ಮುಕ್ತ ನಗರ ಮತ್ತು ನಗರದ ಸ್ವಚ್ಚತೆಯನ್ನು ಕಾಪಾಡಿಕೊಂಡು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕೋಲಾರ ನಗರಸಭೆಯ ಪೌರಾಯುಕ್ತರಾದ ಶ್ರೀಕಾಂತ್ ಅವರು ತಿಳಿಸಿದರು.
ಇಂದು ಕೋಲಾರ ನಗರ ಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ, ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ದಿನಗಳಲ್ಲಿ ಪೌರಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅವರ ಸೇವೆಯನ್ನು ಮನಗಂಡು ಅವರನ್ನು ಗೌರವಯುತವಾಗಿ ಕಾಣುತ್ತಿದ್ದಾರೆ. ಸರ್ಕಾರವು ಪೌರಕಾರ್ಮಿಕರನ್ನು ಆರ್ಥಿಕವಾಗಿ ಸದೃಡವಾಗುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
17 ಜನ ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದ ನಿವೇಶನ ಮತ್ತು ಮನೆಯನ್ನು ಕಟ್ಟಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಪೌರಕಾರ್ಮಿಕ ನಿಧಿಯನ್ನು ಕ್ರೂಡಿಕರಿಸಿ ನಂತರ ನೇಮಕಾತಿ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆಯ ಸದಸ್ಯರಾದ ಅಂಬರೀಶ್ ಅವರು ಮಾತನಾಡಿ, ಪೌರಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದರು ನಂತರ ಅವರನ್ನು ಸಂಘಟಿತರನ್ನಾಗಿ ಮಾಡಿದ ಕೀರ್ತಿ ಉಗ್ರಪ್ಪ ನವರಿಗೆ ಸಲ್ಲುತ್ತದೆ ಎಂದು ನೆನಸಿಕೊಂಡರು. ಕೆಲವು ಕಡೆ ಜನರು ಪೌರಕಾರ್ಮಿಕರನ್ನು ಅತ್ಯಂತ ಉದಾಸೀನತೆಯಿಂದ ನೋಡುತ್ತಿದ್ದಾರೆ. ಈ ಮನೋಭಾವನೆಯು ಜನರಲ್ಲಿ ಬದಲಾಗಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಪೌರಕಾರ್ಮಿಕರ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇ. 42 ರಷ್ಟು ಜನರು ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶಗಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಲಜಿ ವಹಿಸಬೇಕು ಎಂದು ತಿಳಿಸಿದರು.
ನಗರಸಭೆಯ ಸದಸ್ಯರಾದ ಪ್ರಸಾದ್ಬಾಬು ಅವರು ಮಾತನಾಡಿ, ಪೌರಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ನಗರಸಭೆ ವತಿಯಿಂದ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ವಾರಕೊಮ್ಮೆ ಅಗತ್ಯ ಸಲಕರಣೆಗಳಾದ ಶೂ, ಗ್ಲೌಸ್ ಗಳನ್ನು ಬದಲಾವಣೆ ಮಾಡಬೇಕು. ಮನೆ ಇಲ್ಲದ ಪೌರಕಾರ್ಮಿಕರು ನಗರಸಭೆಗೆ ಅರ್ಜಿ ಸಲ್ಲಿಸಿದರೆ ಅವರಿಗೆ ನಗರಸಭೆ ವತಿಯಿಂದ ಮನೆ ನೀಡಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರು, ನಗರ ಠಾಣೆಯ ಸಬ್ ಇನ್ಸ್ಪ್ಟರ್ ಅಣ್ಣಯ್ಯ, ನಗರಸಭೆಯ ನಾಮನಿರ್ದೇಶನ ಸದಸ್ಯರುಗಳಾದ ವೆಂಕಟೇಶ, ಲಾಲ್ ಚನ್ , ಅರುಣಮ್ಮ, ರಾಜೇಶ್, ನಗರಸಭೆಯ ಕಂದಾಯ ನಿರಿಕ್ಷಕರಾದ ತ್ಯಾಗರಾಜ್ ಸೇರಿದಂತೆ ಪೌರಕಾರ್ಮಿಕರು ಹಾಗೂ ಮತ್ತಿತರು ಉಪಸ್ಥಿತರಿದ್ದರು.