ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸ್ವ ಸಹಾಯ ಸಂಘಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ: ಜಿಲ್ಲಾ ಪಂಚಾಯಿತಿಯ ಎನ್.ಆರ್.ಎಲ್.ಎಂ ಸಂಯೋಜಕ ಸುಂದರೇಶ್
ಕೋಲಾರ, ಜು.08 ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸ್ವ ಸಹಾಯ ಸಂಘಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತ ವೆ ಎಂದು ಜಿಲ್ಲಾ ಪಂಚಾಯಿತಿಯ ಎನ್.ಆರ್.ಎಲ್.ಎಂ ಸಂಯೋಜಕ ಸುಂದರೇಶ್ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯತ್‍ವತಿಯಿಂದ ಗ್ರಾಮ ಮಟ್ಟದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರವು ಸ್ವ ಸಹಾಯ ಸಂಘಗಳನ್ನು ರಚಿಸಿರುವ ಮೂಲ ಉದ್ದೇಶ ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕಾಭಿವೃದ್ದಿಯ ಜೊತೆ ಅವರನ್ನು ಸ್ವಾವಲಂಭಿಗಳಾಗಿ ರೂಪಿಸುವ ಕಲ್ಪನೆಯಿಂದ, ಆದ್ದರಿಂದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಯಾಗಿರುವವರು ಸ್ವ ಸಹಾಯ ಸಂಘಗಳ ಸದಸ್ಯರ ಜೊತೆ ಸೌಹಾರ್ದತೆಯನ್ನು ಕಾಪಾಡಿಕೊಂಡು, ಸಂಘಗಳ ಬಲವರ್ಧನೆಗೆ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಗ್ರಾಮ ಮಟ್ಟದಲ್ಲಿ ಸಂಘಗಳಿಗೆ ಜನರನ್ನು ಸೇರ್ಪಡೆ ಮಾಡಿ ಒಕ್ಕೂಟಗಳನ್ನು ರಚಿಸುವುದರ ಜೊತೆಗೆ, ಸರಕಾರಗಳ ಪ್ರತಿಯೊಂದು ಯೋಜನೆಗಳ ಬಗ್ಗೆಯು ಜನರಿಗೆ ಅರಿವು ನೀಡುವುದರ ಮೂಲಕ ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗುವ ಒಳ್ಳೆಯ ಅವಕಾಶವಿದೆ ಎಂದು ತಿಳಿಸಿದರು.
ಸ್ವ ಸಹಾಯ ಸಂಘಗಳಿಗೆ ಸರಕಾರಗಳು ಕೂಡ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಆದರೂ ಸಂಘಗಳ ಸದಸ್ಯರಿಗೆ ಮಾಹಿತಿಯ ಕೊರತೆ ಇದೆ. ಸಂಘದ ಧ್ಯೇಯೋದ್ದೇಶಗಳ ಬಗ್ಗೆ ಸಮರ್ಪಕ ಅರಿವು ಇಲ್ಲ, ಇಂತಹ ಸಂದರ್ಭಗಳಲ್ಲಿ ಸಂಘದ ರಚನೆಯ ಉದ್ದೇಶ ಈಡೇರಲ್ಲ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಇಂತಹ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್ ಯಾದವ್ ಬಿ ಮಾತನಾಡಿ, ಸ್ವ ಸಹಾಯ ಸಂಘಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಸರಕಾರದ ಜೊತೆಗೆ ಬ್ಯಾಂಕ್ ಗಳು ಕೂಡ ಸಾಲ ಸೌಲಭ್ಯ ನೀಡಲು ಸಿದ್ದವಿರುತ್ತವೆ ಎಂದು ತಿಳಿಸಿದರು.