ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು: ಜಿಲ್ಲಾಧಿಕಾರಿ ಸಿ.ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು , ಈ ಕಾನೂನು ಪಾಲಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಸೂಚಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು . ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು . ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗೆ ಸೂಚಿಸಿದರು . ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಸರ್ವೀಸ್ ರಸ್ತೆಯನ್ನು ನಿರ್ಮಿಸಿದ್ದು , ಇಲ್ಲಿ ಡ್ರೈನೇಜ್ ನಿರ್ಮಿಸಬೇಕು . ಎ.ಪಿ.ಎಂ.ಸಿ. , ಮೆಡಿಕಲ್ ಕಾಲೇಜು ಇಲ್ಲಿ ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು . ಹೆದ್ದಾರಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು . ಬೇರೆ ಬೇರೆ ಜಿಲ್ಲೆಗಳ ಹೆದ್ದಾರಿಗಳಲ್ಲಿ ಸ್ವಚ್ಛತೆಯನ್ನು ಉತ್ತಮವಾಗಿ ಕಾಪಾಡಿದ್ದಾರೆ ನಮ್ಮ ಜಿಲ್ಲೆಯ ಹೆದ್ದಾರಿಗಳಲ್ಲಿ ಸ್ವಚ್ಚತೆ ಯಾಕೆ ಕಾಪಾಡಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು , ಒಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ 14 ಬ್ಲಾಕ್ ಸ್ಟಾಟ್‌ಗಳನ್ನು ಗುರುತಿಸಿ ಸುರಕ್ಷತೆ ಕೈಗೊಳ್ಳವಂತೆ ಲ್ಯಾಂಕೋ ಸಂಸ್ಥೆಗೆ ಸೂಚಿಸಲಾಗಿತ್ತು . ಆದರೆ ಸಂಪೂರ್ಣವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ , ಜೀವ ಅತ್ಯಮೂಲ್ಯವಾದದ್ದು ಹೊದ ಜೀವವನ್ನು ತರಲು ಸಾಧ್ಯವಿಲ್ಲ . ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು . ಮುಂದಿನ ತಿಂಗಳು ರಸ್ತೆ ಸುರಕ್ಷತಾ ಸಭೆಯನ್ನು ಕರೆಯಲಾಗುವುದು . 15 ದಿನದೊಳಗೆ 20 ಬ್ಲಾಕ್ ಸ್ಟಾಟ್‌ಗಳಲ್ಲಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು . 3 ತಿಂಗಳೊಳಗೆ ಶಾಶ್ವತ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು . ನಗರದಲ್ಲಿ 3 ರಿಂದ 4 ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುತ್ತಿದೆ . ನಗರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಿ . ಜಿಲ್ಲಾಧಿಕಾರಿಗಳ ಕಛೇರಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿ , ಮುಂದಿನ ಸಭೆಗೆ ಅಂಕಿ ಅಂಶಗಳ ಸೂಕ್ತ ಮಾಹಿತಿಯೊಂದಿಗೆ ಬರುವಂತೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು . ಅವರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಆರ್.ರವಿಕುಮಾರ್ ಮಾತನಾಡಿ , ಕೊಂಡರಾಜನಹಳ್ಳಿ ಬೈಪಾಸ್ ಬಳಿ ಸರ್ವೀಸ್ ರಸ್ತೆಯನ್ನು ವ್ಯಾಪಾರಿಗಳು ಹಾಗೂ ವರ್ತಕರು ತಾತ್ಕಾಲಿಕವಾಗಿ ಒತ್ತುವರಿ ಕಾಡಿಕೊಂಡಿದ್ದಾರೆ . ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು . ಹೆದ್ದಾರಿಯಲ್ಲಿ ಬರುವ ಸಂಪೂರ್ಣ ಜಾಗವನ್ನು ಸುಗಮ ಸಾರಿಗೆಗೆ ಬಳಸಬೇಕು ಎಂದರು . ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಮಡೇರಹಳ್ಳಿಯ ಬೈಪಾಸ್ ಬಳಿ ವಿವಿಧ ಆಪಘಾತಗಳು ಉಂಟಾಗಿ 7 ಜನರು ಮರಣ ಹೊಂದಿದ್ದಾರೆ . ಅವೈಜ್ಞಾನಿಕವಾದ ಸ್ಪೀಡ್ ಬ್ರೇಕರ್‌ಗಳನ್ನು ತೆಗೆದು ವೈಜ್ಞಾನಿಕ ಸ್ವೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕು ಎಂದರು . ಸಭೆಯಲ್ಲಿ ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಹೆಚ್.ಜಾಹ್ನವಿ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಪ್ರಶಾಂತ್ ಸೇರಿದಂತೆ ಸಾರಿಗೆ ಇಲಾಖೆ , ಕಾರ್ಮಿಕ ಇಲಾಖೆ , ಕೆ.ಎಸ್.ಆರ್.ಟಿ.ಸಿ , ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು .