ಡಿಸಿಸಿ ಬ್ಯಾಂಕ್ ನವಚೈತನ್ಯದೊಂದಿಗೆ ಇಡೀ ದೇಶಕ್ಕೆ ಮಾದರಿಯಾಗಲು ಮಹಿಳೆಯರ ಪ್ರಾಮಾಣಿಕತೆ,ಬದ್ದತೆ ಕಾರಣ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಡಿಸಿಸಿ ಬ್ಯಾಂಕ್ ನವಚೈತನ್ಯದೊಂದಿಗೆ ಇಡೀ ದೇಶಕ್ಕೆ ಮಾದರಿಯಾಗಲು ಮಹಿಳೆಯರ ಪ್ರಾಮಾಣಿಕತೆ,ಬದ್ದತೆ ಕಾರಣ-ಬ್ಯಾಲಹಳ್ಳಿ ಗೋವಿಂದಗೌಡ 

 

 

 

ಕೋಲಾರ:- ಡಿಸಿಸಿ ಬ್ಯಾಂಕ್ ನವ ಚೈತನ್ಯದೊಂದಿಗೆ ದೇಶಕ್ಕೆ ಮಾದರಿಯಾಗಲು ಮಹಿಳೆಯರ ಪ್ರಾಮಾಣಿಕತೆ, ಸಾಲ ಮರುಪಾವತಿಯಲ್ಲಿನ ಬದ್ದತೆಯೇ ಕಾರಣವಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಬುಧವಾರ ಕೋಲಾರ-ಬಂಗಾರಪೇಟೆ ರಸ್ತೆಯ ಚಿಕ್ಕಅಂಕಂಡಹಳ್ಳಿ ಗ್ರಾಮದ ರೇಷ್ಮೆಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ಸಂಘಗಳಿಗೆ 2.20 ಕೋಟಿ ರೂ ಸಾಲ ವಿತರಣೆ ಹಾಗೂ `ಕಿಸಾನ್ ಲಕ್ಷ್ಮಿ’ ಠೇವಣಿ ಬಾಂಡ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾ ಭೀತಿ
ಗ್ರಾಮದಲ್ಲೇ ಸಾಲ
ಕೊರೋನಾ ಭೀತಿ ಹಿನ್ನಲೆಯಲ್ಲಿ ಸಾಲ ವಿತರಣೆಗಾಗಿ ಸಭೆ,ಸಮಾರಂಭ ನಡೆಸಲು ಸಾಧ್ಯವಿಲ್ಲ ಆದರೆ ತಾಯಂದಿರಿರುವ ಗ್ರಾಮಗಳಿಗೆ ಹೋಗಿ ಸಾಲವನ್ನು ವಿತರಿಸುವ ಕಾರ್ಯ ಡಿಸಿಸಿ ಬ್ಯಾಂಕ್ ಮಾಡುತ್ತಿದೆ ಎಂದು ತಿಳಿಸಿದರು.
ಸಾಲ ವಿತರಣೆಗೆ ಸೊಸೈಟಿಗಳ ಅಧ್ಯಕ್ಷರು,ಕಾರ್ಯದರ್ಶಿಗಳು, ಬ್ಯಾಂಕಿನ ಅಧ್ಯಕ್ಷರು ಆ ಭಾಗದ ನಿರ್ದೇಶಕರು ಮಾತ್ರ ಹಾಜರಿದ್ದು, ಸಾಲ ವಿತರಿಸುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕಿನಲ್ಲೇ
ಉಳಿತಾಯ ಮಾಡಿ
ತಾಯಂದಿರ ಆಶೀರ್ವಾದವೇ ಡಿಸಿಸಿ ಬ್ಯಾಂಕಿಗೆ ಶ್ರೀರಕ್ಷೆಯಾಗಿದ್ದು, ನಿಮ್ಮ ಸ್ವಾಭಿಮಾನದ ಜೀವನಕ್ಕೆ ಎಲ್ಲಾ ಆರ್ಥಿಕ ನೆರವು ನೀಡಲು ಬ್ಯಾಂಕ್ ಸಿದ್ದವಿದೆ ಎಂದರು.
ತಾಯಂದಿರು ತಮ್ಮದೇ ತವರುಮನೆಯಾದ ಈ ಬ್ಯಾಂಕಿನಲ್ಲೇ ನಿಮ್ಮ ಉಳಿತಾಯದ ಹಣ ಠೇವಣಿ ಇಡಬೇಕು, ಇತರೆ ಬ್ಯಾಂಕುಗಳಲ್ಲಿ ಹಣವಿಟ್ಟಿದ್ದರೆ ಕೂಡಲೇ ವಾಪಸ್ಸು ಪಡೆದು ಡಿಸಿಸಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಬಡ್ಡಿ ನೀಡುವುದರ ಜತೆಗೆ ಮತ್ತಷ್ಟು ತಾಯಂದಿರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತದೆ ಎಂದರು.
ಯಾವುದೇ ಭದ್ರತೆಯಿಲ್ಲದೇ ತಾಯಂದಿರನ್ನು ನಂಬಿ ಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿದೆ, ತಾಯಂದಿರನ್ನು ಮೀಟರ್ ಬಡ್ಡಿ ಶೋಷಣೆಯಿಂದ ತಪ್ಪಿಸಿ, ಅವರು ಸ್ವಾಭಿಮಾನದಿಂದ ಜೀವನ ನಡೆಸುವಂತಾಗಲಿ ಎಂಬ ಬದ್ದತೆಯಿಂದ ಇಡೀ ದೇಶದಲ್ಲೇ ತಾಯಂದಿರಿಗೆ ಅತಿ ಹೆಚ್ಚು ಸಾಲ ನೀಡಿರುವ ಬ್ಯಾಂಕ್ ನಮ್ಮದು ಎಂಬ ಹೆಗ್ಗಳಿಕೆ ಇದ್ದು, ಈ ಗೌರವ ಉಳಿಸಿ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಳ್ಳಿ ಗೋವಿಂದರಾಜು, ಡಿಸಿಸಿ ಬ್ಯಾಂಕ್ ಮೀಟರ್ ಬಡ್ಡಿಯಿಂದ ಸಂಕಷ್ಟಕ್ಕೀಡಾಗಿದ್ದ ತಾಯಂದಿರ ನೆರವಿಗೆ ಧಾವಿಸಿರುವುದರಿಂದ ಅವರಲ್ಲಿ ಹೊಸ ಚೈತನ್ಯ ಮೂಡಲು ಕಾರಣವಾಗಿದೆ ಎಂದು ತಿಳಿಸಿದರು.
ಸಾಲ ಮರುಪಾವತಿಯಲ್ಲಿ ಮಹಿಳೆಯರು ನಂಬಿಕೆ ಉಳಿಸಿಕೊಳ್ಳುವ ಮೂಲಕ ಮತ್ತಷ್ಟು ಮಹಿಳೆಯರಿಗೆ ಸಾಲ ನೀಡುವ ಧೈರ್ಯವನ್ನು ತುಂಬಿದ್ದಾರೆ, ಇದೀಗ ಬ್ಯಾಂಕ್ ಠೇವಣಿ ಸಂಗ್ರಹಕ್ಕೂ ಒತ್ತು ನೀಡುವ ಮೂಲಕ ಪ್ರತಿಕುಟುಂಬದ ತಾಯಂದಿರಿಗೂ ಸಾಲದ ನೆರವು ಒದಗಿಸುವ ಬದ್ದತೆಯಿಂದ ಉಳಿತಾಯ ಸಂಗ್ರಹ ಆಂದೋಲನ ನಡೆಸುತ್ತಿದ್ದು, ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಇಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಅಂಕಂಡಹಳ್ಳಿ ಎಸ್‍ಎಫ್‍ಸಿಎಸ್ ಅಧ್ಯಕ್ಷ ಹೊಸೂರು ಕೃಷ್ಣಪ್ಪ, ಹುಲಿಬೆಲೆ ಎಸ್‍ಎಫ್‍ಸಿಎಸ್ ಅಧ್ಯಕ್ಷೆ ವೀಣಾವೆಂಕಟೇಶ್, ಕಾರ್ಯದರ್ಶಿ ರಾಮಣ್ಣ ಸೇರಿದಂತೆ ಸೊಸೈಟಿಯ ಎಲ್ಲಾ ನಿರ್ದೇಶಕರು ಹಾಜರಿದ್ದರು.