ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಮತ್ತು ತೋಟಗಾರಿಕೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 09.09.2020 ರಂದು “ಟೊಮ್ಯಾಟೊ ಬೆಳೆಯಲ್ಲಿ ಊಜಿನೊಣ (ಸೌತ್ ಅಮೆರಿಕನ್ ಪಿನ್ ವಾರ್ಮ್) ದ ಸಮಗ್ರ ನಿರ್ವಹಣೆ” ಬಗ್ಗೆ ಹಮ್ಮಿಕೊಂಡಿದ್ದ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರಿನ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ವಿ. ಶ್ರೀಧರ್, ಪ್ರಧಾನ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಟೊಮ್ಯಾಟೊದಲ್ಲಿ ಇತ್ತೀಚಿಗೆ 4-5 ವರ್ಷಗಳಿಂದ ಟೂಟಾದ/ ಊಜಿನೊಣದ ಭಾದೆ ಹೆಚ್ಚಾಗಿದ್ದು ರೈತರು ಸಮಗ್ರ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಕೀಟದ ಭಾದೆ ಕಡಿಮೆ ಮಾಡಬಹುದೆಂದು ತಿಳಿಸಿದರು.
ಜೈವಿಕ ನಿಯಂತ್ರಕಗಳಾದ ಪರಾವಲಂಬಿ ಕೀಟಗಳಾದ “ಟ್ರೈಕೋಗ್ರಾಮ ಪ್ರಿಟಿಯೇಸಂ”ನ್ನು ಬಳಸುವುದು ಮತ್ತು ಶಿಲೀಂದ್ರ ಜೈವಿಕ ನಾಶಕವಾದ ಮೆಟಾರಿಜಿಯಂನ್ನು ಬಳಸುವುದು, ವಿದ್ಯುತ್ ಬಲ್ಬ್ ಬಳಸಿ ಬೆಳಕಿನ ಬಲೆ ಮತ್ತು ಗಂಡು ಮೊಹಕ ಬಲೆ ಅಳವಡಿಸಿಕೊಳ್ಳಬೇಕು ಮತ್ತು ರಾಸಾಯನಿಕಗಳನ್ನು ಬಳಸಿ ನಿಯಂತ್ರಿಸಬಹುದು ಎಂದು ಅಲ್ಲದೇ ಕೀಟ ನಿರೋಧಕತೆ ಹೊಂದಿರುವ ತಳಿ ಅಭಿವೃದ್ಧಿ ಪಥದಲ್ಲಿದೆ ಎಂದು ತಿಳಿಸಿದರು.
ಅಂತರ್ಜಾಲ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರು ಮತ್ತು ಇಲಾಖೆ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಶ್ರೀ. ಕೆ. ತುಳಸಿರಾಮ್ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕೋಲಾರವರು ಸ್ವಾಗತಿಸಿದರು. ಡಾ. ಅಂಬಿಕಾ ಡಿ.ಎಸ್ ವಿಜ್ಞಾನಿ (ಸಸ್ಯ ಸಂರಕ್ಷಣೆ) ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಡಾ. ಜ್ಯೋತಿ ಕಟ್ಟೆಗೌಡರ, ವಿಜ್ಞಾನಿ (ತೋಟಗಾರಿಕೆ) ಮತ್ತು ಡಾ. ಶಶಿಧರ್ ಕೆ.ಆರ್, ವಿಜ್ಞಾನಿ (ರೇಷ್ಮೆಕೃಷಿ) ರವರು ಭಾಗವಹಿಸಿದ್ದರು ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಮಂಜುನಾಥ ರೆಡ್ಡಿ, ಆನಂದ, ಚಿಂತಾಮಣಿಯ ಹರೀಶರೆಡ್ಡಿ, ಹಾಸನದ ಪ್ರವೀಣ ಶಿರೂರ, ಹಾಲೇಶಕುಮಾರ್ ಮುಂತಾದ ರೈತರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು.