ಜೂ.30ರೊಳಗೆ ಸೊಸೈಟಿಗಳ  ಗಣಕೀಕರಣ,ಆಡಿಟ್ ಮುಗಿಸಿ-ಬ್ಯಾಲಹಳ್ಳಿ ಗೋವಿಂದಗೌಡ ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ವ್ಯವಸ್ಥಾಪಕರೇ ಹೊಣೆ-ಎಚ್ಚರಿಕೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಜೂ.30ರೊಳಗೆ ಸೊಸೈಟಿಗಳ  ಗಣಕೀಕರಣ,ಆಡಿಟ್ ಮುಗಿಸಿ-ಬ್ಯಾಲಹಳ್ಳಿ ಗೋವಿಂದಗೌಡ
ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ವ್ಯವಸ್ಥಾಪಕರೇ ಹೊಣೆ-ಎಚ್ಚರಿಕೆ

 

 

ಕೋಲಾರ:- ಸೊಸೈಟಿಗಳ ಆಡಿಟ್ ಹಾಗೂ ಗಣಕೀಕರಣ ಜೂ.30ರೊಳಗೆ ಮುಗಿಸಿ, ಸಾಲ ವಿತರಣೆಗೆ ಸಂಬಂಧಿಸಿದ ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ವ್ಯವಸ್ಥಾಪಕರು ಹಾಗೂ ಮೇಲ್ವಿಚಾರಕರೇ ಹೊಣೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ನಗರದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಎರಡೂ ಜಿಲ್ಲೆಗಳ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಹಾಗೂ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾ ಸಂಕಷ್ಟದಲ್ಲೂ ನಿಮಗೆ ಸಮರ್ಪಕ ವೇತನ ನೀಡಿದ್ದೇವೆ, ನಿಮ್ಮ ಕುಟುಂಬಕ್ಕೂ 3 ಲಕ್ಷದವರೆಗೂ ಆರೋಗ್ಯ ವಿಮೆ ನೀಡಿದ್ದೇವೆ, ಬ್ಯಾಂಕ್ ಇಡೀ ನಿಮ್ಮ ಕುಟುಂಬಕ್ಕೆ ಆಸರೆಯಾಗಿರುವಾಗ ನೀವು ಬದ್ದತೆಯಿಂದ ಕೆಲಸ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಸಾಲ ಮಂಜೂರು ಮಾಡುವಾಗ ಕೇಂದ್ರ ಕಚೇರಿ ನೀಡುವ ನೀಡಿರುವ ಮಾರ್ಗಸೂಚಿಯಂತೆ ದಾಖಲೆ ಸಮರ್ಪಕವಾಗಿರಬೇಕು, ಸೂಕ್ತ ದಾಖಲೆಗಳಿಲ್ಲದಿದ್ದರೆ ಯಾರೇ ಶಿಫಾರಸ್ಸು ಮಾಡಿದರೂ ಸಾಲ ಮಂಜೂರು ಮಾಡಬೇಡಿ ಎಂದು ತಾಕೀತು ಮಾಡಿದರು.
ನಬಾರ್ಡ ಅಥವಾ ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳು ಯಾರೇ ಬಂದು ಕಡತಗಳ ಪರಿಶೀಲನೆ ನಡೆಸಿದರೂ, ದಾಖಲೆಗಳು ಪರಿಪಕ್ವತೆಯಿಂದ ಕೂಡಿರಬೇಕು. ಲೋಪಗಳಿದ್ದರೆ ಅದಕ್ಕೆ ನೀವೇ ಹೊಣೆ ಎಂದು ತಿಳಿಸಿದರು.

ಲೆಕ್ಕಸಮನ್ವಯತೆ ಪಕ್ಕಾ ನಿರ್ವಹಣೆ

ಬ್ಯಾಂಕ್ ದಿವಾಳಿ ದಿನಗಳನ್ನು ನೆನೆಸಿಕೊಳ್ಳಿ, ಅಂಗಡಿಗೆ ಹೋದರೆ ಬ್ಯಾಂಕ್ ಸಿಬ್ಬಂದಿಗೆ ದಿನಸಿ ಸಾಲ ಸಿಗುತ್ತಿರಲಿಲ್ಲ, ಆದರೆ ಇಂದು ಗೌರವವಿದೆ, 15 ಕೋಟಿ ಇದ್ದ ಠೇವಣಿ ಇಂದು 250 ಕೋಟಿಗೇರಿದೆ, ಲೆಕ್ಕಸಮನ್ವಯತೆಯಲ್ಲಿ ಪಕ್ಕಾ ಆಗಿದ್ದೇವೆ, ಹಿಂದೆ ಲೆಕ್ಕ ಸಮನ್ವಯತೆಯಲ್ಲಿ 30 ಕೋಟಿ ವ್ಯತ್ಯಾಸವಿದ್ದ ದಿನಗಳನ್ನು ಸ್ಮರಿಸಿಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು.
ಸೊಸೈಟಿ ಗಣಕೀಕರಣದಿಂದ ಪಾರದರ್ಶಕ ವ್ಯವಹಾರವಾಗುತ್ತದೆ, ಸೊಸೈಟಿಗಳಲ್ಲಿ ಸಾಲದ ಹಣ ಪಾವತಿಸುವವರು ಕೂಡಲೇ ರಸೀದಿ ಪಡೆಯಬೇಕು ಎಂದು ಭಿತ್ತಪತ್ರ ಅಂಟಿಸಿ ಎಂದರು.
ನೂರು ಜನ ನಮ್ಮ ಬಗ್ಗೆ ಮಾತಾಡಿಕೊಳ್ಳಲಿ ದಾಖಲೆಗಳು ಸಮರ್ಪಕವಾಗಿದ್ದರೆ ಯಾರಿಗೂ ಹೆದರಬೇಕಾಗಿಲ್ಲ, ಅಂದಿನ ಕೆಲಸ,ಲೆಕ್ಕವನ್ನು ಅಂದೇ ಮುಗಿಸಬೇಕು ಎಂದು ಸೂಚಿಸಿದರು.

ಡವರಿಂದಲೇ ಬ್ಯಾಂಕ್ ಉಳಿದಿದೆ

ಡಿಸಿಸಿ ಬ್ಯಾಂಕ್ ಶ್ರೀಮಂತರದ್ದಲ್ಲ, ಇದು ಬಡವರ, ರೈತರ ಮತ್ತು ಮಹಿಳೆಯರ ಬ್ಯಾಂಕ್ ಆಗಿದೆ, ಇಲ್ಲಿರುವ 250 ಕೋಟಿ ರೂ ಠೇವಣಿ ಬಡ ರೈತರು, ಮಹಿಳೆಯರದ್ದೆ, ಯಾವ ಶ್ರೀಮಂತರೂ ಇಲ್ಲಿ ಡಿಪಾಸಿಟ್ ಇಡಲ್ಲ ಎಂದರು.
ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ 6 ವರ್ಷಗಳಿಂದ ಬ್ಯಾಂಕ್ ಸಿಬ್ಬಂದಿ ವಿರುದ್ದ ಒಂದೇ ಒಂದು ಹಣ ದುರುಪಯೋಗದ ದೂರು ಬಂದಿಲ್ಲ ಎಂಬುದ ಹೆಮ್ಮೆಯ ವಿಷಯ ಎಂದರು.
ಎಸ್‍ಎಫ್‍ಸಿಎಸ್‍ಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತೇವೆ, ಅಲ್ಲಿನ ವ್ಯವಹಾರ ಗಮನಿಸುವುದು ಸೂಪರ್‍ವೈಸರ್‍ಗಳ ಕರ್ತವ್ಯ, ಅಲ್ಲಿ ನಡೆಯುವ ಆಡಳಿತ ಮಂಡಳಿ ಸಭೆಗಳಿಗೆ ತಪ್ಪದೇ ಭಾಗವಹಿಸಿ ಎಂದರು.

40 ಸಾವಿರ ಎಟಿಎಂ ಕಾರ್ಡ್ ವಿತರಣೆ

ಈಗಾಗಲೇ 32 ಸಾವಿರ ಎಟಿಎಂ ಕಾರ್ಡ್ ವಿತರಿಸಲಾಗಿದೆ, ಮುಂದೆ ಎಂಪಿಸಿಎಸ್‍ಗಳಿಗೆ ಹಾಲು ಹಾಕುವ ರೈತರ ವೈಯುಕ್ತಿಕ ಖಾತೆಗಳನ್ನು ಡಿಸಿಸಿ ಬ್ಯಾಂಕಿನಲ್ಲಿ ಮಾಡಿಸಿ ಅವರಿಗೆ ಎಟಿಎಂ ಕಾರ್ಡ್ ವಿತರಿಸಿ, ಹಾಲು ಉತ್ಪಾದಕರ ವೈಯುಕ್ತಕ ಖಾತೆ ಮಾಡಿಸುವ ಸಂಬಂಧ ಪ್ರತಿ ತಾಲ್ಲೂಕಿಗೂ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗುವುದು ಎಂದರು.
ಬಡ ಗ್ರಾಹಕರಿಗೆ ಶೂನ್ಯ ಠೇವಣೆಯಲ್ಲಿ ಖಾತೆ ತೆರೆಯಲು ಅವಕಾಶ ನೀಡಿ ಈ ಖಾತೆಗಳಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಬರಲಿದೆ ಎಂದ ಅವರು ಶಾನುಭೋಗನಹಳ್ಳಿ ವೃದ್ದೆಯೊಬ್ಬಳು ಕೇವಲ 5 ರೂನಲ್ಲಿ ಖಾತೆ ತೆರೆದು ಬಿಟ್ಟಿದ್ದು, ಇಂದು ಆ ಖಾತೆಯಲ್ಲಿ ಸುಮಾರು 1.35 ಲಕ್ಷ ರೂ ಇದೆ ಎಂದು ಉದಾಹರಿಸಿದರು.
ಡಿಸಿಸಿ ಬ್ಯಾಂಕಿನ ಎನ್.ಪಿ.ಎ. ಶೂನ್ಯವಾಗಿರ ಬೇಕೆಂಬುವುದು ನನ್ನ ಕನಸಾಗಿದೆ ಅದಕ್ಕಾಗಿ ಬದ್ದತೆಯಿಂದ ಕಾರ್ಯನಿರ್ವಹಿಸಿ ಎಂದ ಅವರು, ಕೇಂದ್ರ ಸರ್ಕಾರಿದಿಂದ ಬಡ್ಡಿ ಹಣ 52 ಕೋಟಿರೂ ಬರಬೇಕಾಗಿದೆ. ಆ ಮೊತ್ತವು ಬಂದಲ್ಲಿ ಬ್ಯಾಂಕಿನ ಅರ್ಥಿಕ ಸ್ಥಿತಿ ಮತ್ತಷ್ಟು ಸುಧಾರಣೆಯಾಗಲಿದೆ ಎಂದರು.
ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಖಲಿಂಮುಲ್ಲಾ, ನಾಗೇಶ್, ಚೌಡಪ್ಪ, ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ, ಅಂಬರೀಷ್, ಭಾನುಪ್ರಕಾಶ್,ಜ್ಯೋತಿ, ಆನಂದ್, ಅಸ್ಲಾಂ, ಚೆಲುವರಾಜು, ಚಂದ್ರಶೇಖರ್, ಮಂಜುನಾಥ್, ತನಿಖಾ ತಂಡದ ಅರುಣ್, ವಿನಯ್‍ಪ್ರಸಾದ್ ಮತ್ತಿತರರಿದ್ದರು. ಹಾಜರಿದ್ದರು.