ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಜಿಲ್ಲೆಯಲ್ಲಿ 2 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮೇಳ ಆಯೋಜನೆ –ಗಾಯಿತ್ರಿ ಎಂ
ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ ಫಲಪುಷ್ಪ ಪ್ರದರ್ಶನವನ್ನು 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಗಾಯಿತ್ರಿ ಎಂ. ಅವರು ತಿಳಿಸಿದರು.
ಇಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜ. 26 ಮತ್ತು 27 ರಂದು ಜಿಲ್ಲಾ ತೋಟಗಾರಿಕೆ ನರ್ಸರಿಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಶಿವಲಿಂಗ. ಈ ಶಿವಲಿಂಗವನ್ನು ಸಂಪೂರ್ಣವಾಗಿ ಗುಲಾಬಿ ಹೂಗಳಿಂದ ಮಾಡಲಾಗಿದ್ದು, ಈ ಗುಲಾಬಿಗಳನ್ನು ಜಿಲ್ಲೆಯ ಮುಳಬಾಗಿಲು ಮತ್ತು ಮಾಲೂರು ತಾಲ್ಲೂಕಿನ ರೈತರೆ ಬೆಳೆದಿರುವ ಗುಲಾಬಿ ಹೂಗಳಿಂದ ನಿರ್ಮಿಸಲಾಗಿದೆ.
ವಿಶೇಷವಾಗಿ ರಾಜ್ಯ ತೋಟಗಾರಿಕೆ ಪಿತಾಮಹರಾದ ಡಾ|| ಎಂ.ಹೆಚ್. ಮರಿಗೌಡರ ಮರಳಿನ ಕೆತ್ತನೆ ಹಾಗೂ ಮಕ್ಕಳ ಆಕರ್ಷಣೆಗಾಗಿ ಚಿಟ್ಟೆ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಮನೆಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ಈ ಪ್ರದರ್ಶನದಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಲಾಗುವುದು. ಇಲಾಖೆಯ ನರ್ಸರಿಯ ಪಾಲಿಹೌಸ್ನಲ್ಲಿ ವಿವಿಧ ತರಕಾರಿಗಳನ್ನು ಬೆಳೆಯಲಾಗಿದ್ದು, ಬೆಳೆಗಳ ಪ್ರಾತ್ಯಕ್ಷತೆಯನ್ನು ಸಾರ್ವಜನಿಕರು ವೀಕ್ಷಿಸಬಹುದು ಎಂದು ತಿಳಿಸಿದರು.
ಫಲಪುಷ್ಪ ಪ್ರದರ್ಶನಕ್ಕೆ 4 ತಿಂಗಳಿನಿಂದ ಸಿದ್ಧತೆಗಳನ್ನು ನಡೆಸಲಾಗಿದ್ದು, ಸುಮಾರು 6 ಸಾವಿರ ವಿವಿಧ ರೀತಿಯ ಹೂಗಳ ಪಾಟುಗಳನ್ನು ಬಳಸಲಾಗಿದೆ. ಅಗ್ಲೋನೇಮಾ, ಅಕೇಲಿಪಾ, ಟ್ರೈಕೋಲರ್, ಅಕೇಲಿಪಾ ವಿಲ್ಕೆಸಿಯಾನಾ, ಪ್ಲುಮೇರಿಯಾ ಪುಡಿಕ ವೈಟ್, ಜಟ್ರೊಫಾ ಇಂಟಿಜಿರಿಮಾ, ಪೈಕಾಸ್ ಬೆಂಜಮಿನ್ ಗ್ರೀನ್, ಪೈಕಾಸ್ಬೆಂಜಮಿನ್ ವೈಟ್, ಎರಾಥೆಮಾಮ್ ಕೆಂಪು, ಎರಾಥೆಮಾಮ್ ನಿಗ್ರಿಮ್, ಎರಾಥೆಮಾಮ್ ಅಟ್ರೊಪುರ್ಪುರಿಯಮ್, ಯಲ್ಲೋ ವೈನ್ ಎರಾಥೆಮಾಮ್, ಎರಾಥೆಮಾಮ್ ಲೀಪ್ಟಿಕ್ ಗ್ರೀನ್, ಸಾಂಗ್ ಆಫ್ ಇಂಡಿಯಾ ಅಲಂಕಾರಿಕ ಗಿಡಗಳ ಪ್ರದರ್ಶನವಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಬೆಳೆಗಳಾದ ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ವಾಟರ್ ಆ್ಯಪಲ್, ನುಗ್ಗೆ, ಕರಿಬೇವು, ಸೀತಾಫಲ, ಬೆಣ್ಣೆ ಹಣ್ಣು, ಬೆಟ್ಟದ ಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಆರೆಂಜ್, ಹುಣಸೆ, ಚಕೋತ, ಹಲಸು ಸೇರಿದಂತೆ ವಿವಿಧ ಗಿಡಗಳು ಹಾಗೂ ಕೈ ತೋಟಕ್ಕೆ ಅಗತ್ಯವಾದ ತರಕಾರಿ ಬೀಜದ ಕಿಟ್ಗಳು ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಭಾಗವಹಿಸುವ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಉತ್ತಮ ಚಿತ್ರಗಳಿಗೆ ಮತ್ತು ರಂಗೋಲಿಗಳಿಗೆ ವಿಶೇಷ ಬಹುಮಾನವನ್ನು ವಿತರಿಸಲಾಗುತ್ತದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್ ಮಾತನಾಡಿ, ಈ ಪ್ರದರ್ಶನದಲ್ಲಿ ಇಲಾಖೆಯ ಯೋಜನೆಗಳನ್ನು ಬಿಂಬಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸಿರಿಧಾನ್ಯ ಮಳಿಗೆಗಳಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ರೈತರಿಗೆ ಸಮಗ್ರ ಬೇಸಾಯ ಪದ್ದತಿಯನ್ನು ಪರಿಚಯ ಮಾಡಲಾಗುವುದು ಎಂದು ತಿಳಿಸಿದರು.
ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ 10 ಜನರಿಗೆ, ಪ್ರತಿ ತಾಲ್ಲೂಕಿನಿಂದ ತಾಲ್ಲೂಕು ಮಟ್ಟದಲ್ಲಿ 5 ಜನರಿಗೆ “ ಶ್ರೇಷ್ಠ ಕೃಷಿಕ” ಪ್ರಶಸ್ತಿಯನ್ನು ನೀಡಲಾಗುತ್ತದೆ. ರೈತರ ಸಾವಯವ ಕೃಷಿ, ಯಂತ್ರೋಪಕರಣಗಳ ಬಳಕೆ, ರೈತರು ಬೆಳೆದ ಬೆಳೆಗಳ ರಪ್ತು ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.