ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಜ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ
ಕೋಲಾರ : ಭಾರತ ಚುನಾವಣಾ ಆಯೋಗವು ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಲಾಗುತ್ತಿದ್ದು, ದೇಶಾದ್ಯಂತ ಮತಗಟ್ಟೆಗಳನ್ನು ಏರ್ಪಡಿಸಿರುವ ಕಟ್ಟಡಗಳಲ್ಲಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಅರ್ಹ ಹಾಗೂ ನೋಂದಾಯಿತ ಯುವ ಮತದಾರರನ್ನು ಪೋಷಕರೊಂದಿಗೆ, ಮತಗಟ್ಟೆ ಪ್ರದೇಶದ ಶಾಲಾ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರುಗಳನ್ನು, ಸಮಾಜ ಚಿಂತಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ನಿರ್ವಹಿಸಲಾಗುವುದು.
ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ “ಮತದಾರನಾಗಲು ಹೆಮ್ಮೆ-ಮತದಾನ ಮಾಡಲು ಸಿದ್ದ” ಎಂಬ ಬ್ಯಾಡ್ಜ್‍ಗಳನ್ನು ಮತ್ತು ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು (ಎಪಿಕ್) ವಿತರಿಸಲಾಗುವುದು. ರಾಷ್ಟ್ರೀಯ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ಹಾಜರಿರುವ ಯುವ ಮತದಾರರು ಮತ್ತು ನಾಗರೀಕರಿಂದ “ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸ, ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುವ ಬಗ್ಗೆ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಹಾಗೂ ಯಾವುದೇ ಪ್ರೇರೇಪಣೆಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸುವ” ಬಗ್ಗೆ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿ ಸ್ವೀಕರಿಸಲಾಗುವುದು.
ತಾಲ್ಲೂಕು ಮಟ್ಟದಲ್ಲಿಯೂ ತಹಶೀಲ್ದಾರರು ಕಾರ್ಯಕ್ರಮವನ್ನು ನಿರ್ವಹಿಸಲು ಸಿದ್ದತೆಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ 1593 ಮತಗಟ್ಟೆ ಸ್ಥಳಗಳಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಿಂದಲೂ ಹಾಗೂ ಆರು ವಿಧಾನಸಭಾ ಕ್ಷೇತ್ರಗಳ ಕೇಂದ್ರಸ್ಥಾನಗಳಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳವರುಗಳಿಂದಲೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾ ಆಡಳಿತದ ವತಿಯಿಂದ ಜ. 25 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ. ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಹಂತದ ಅಧಿಕಾರಿಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು. ಪ್ರಥಮ ಬಾರಿಗೆ ಮತದಾರರ ಪಟ್ಟಿಯಲ್ಲಿ ಅರ್ಹ ಮತ್ತು ನೋಂದಾಯಿತ ಯುವ ಮತದಾರರು ಮತ್ತು ನಾಗರೀಕರು ಹಾಗೂ ರಾಜಕೀಯ ಪಕ್ಷಗಳವರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದ್ದಾರೆ.