JANANUDI.COM NETWORK
ಕೊರೊನಾ ವೈರಸ್ ಎನ್ನುವುದು ಅತೀ ಸೂಕ್ಷ್ಮವಾದ ಒಂದು ವೈರಾಣು ಜೀವಿ. ಇದು ಎಷ್ಟು ಸಣ್ಣ ಜೀವಿ ಅಂದರೆ ಇದರ ಗಾತ್ರವನ್ನು ನೀವು ಈ ರೀತಿ ಊಹಿಸಿಕೊಳ್ಳಬಹುದು.ಉಡುಪಿ ಜಿಲ್ಲೆ ಸೇರಿದಂತೆ ಬಹುತೇಕ ಎಲ್ಲ ಕಡೆ ಕೊರೊನಾ ಸೋಂಕಿನಿಂದಲೇ ಮರಣ ಹೊಂದಿದವರ ಸಂಖ್ಯೆ ಬಹಳ ಕಡಿಮೆ. ಇತರ ಕಾಯಿಲೆ ಇರುವುದರಿಂದ ಅವರ ದೇಹದ ರೋಗ ನಿರೋಧಕ ಶಕ್ತಿ ದುರ್ಬಲವಾದುದರಿಂದ ಮರಣ ಸಂಭವಿಸಿದೆ. ಕೊರೊನಾ ಸೋಂಕು ಅಪಾಯಕಾರಿಯಲ್ಲ. ಸರಿಯಾದ ಸ್ವಚ್ಛತಾ ನಿಯಮ, ಸಾಮಾಜಿಕ ಅಂತರದ ನಿಯಮ ಪಾಲಿಸದಿದ್ದರೆ ಸೋಂಕು ತಗುಲಿ ಬಾಧಿಸುತ್ತದೆ. ಆದರೆ ಸೋಂಕಿತರು ಶೀಘ್ರವೇ ಗುಣಮುಖರಾಗುತ್ತಿದ್ದಾರೆ. ಕುಂದಾಪುರದಲ್ಲಿ 1110 ಸೋಂಕಿತರಲ್ಲಿ 856 ಮಂದಿ ನೆಮ್ಮದಿಯಿಂದ ಮನೆಗೆ ತೆರಳಿದ್ದಾರೆ. ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿಗೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳೂ ಇವೆ ಎಂದು ಕುಂದಾಪುರ ಸರಕಾರಿ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ನಾಗೇಶ್ ಹೇಳಿದರು.
ಶಿವಪ್ರಸಾದ್ ಗ್ರ್ಯಾಂಡ್ ಸಭಾಂಗಣದಲ್ಲಿ ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ ಕೋವಿಡ್ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
“ಕೊರೊನಾ ಸೋಂಕು ಈಗ ಸಮುದಾಯಕ್ಕೆ ಹರಡಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೆಪ್ಟೆಂಬರ್ ತನಕ ಇತರ ಕಾಯಿಲೆ ಇರುವವರಿಗೆ ಇದು ಸಮಸ್ಯೆಯಾಗಬಹುದು. ಆನಂತರ ಇದರ ಪರಿಣಾಮ ಕಡಿಮೆಯಾಗುತ್ತದೆ. ಡಿಸೆಂಬರ್ ತಿಂಗಳ ಹೊತ್ತಿಗೆ ಇತರ ರೋಗಗಳಂತೆ ಇದನ್ನು ಜನ ಪರಿಗಣಿಸುತ್ತಾರೆ. ಟಿವಿಯಲ್ಲಿ ತೋರಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ” ಎಂದರು.ನಮ್ಮಂತಹ ವೈದ್ಯರಿಗೂ ಈ ಸೋಂಕಿನ ಬಗ್ಗೆ ಆತಂಕ ಇತ್ತು. ಆದರೆ ಈಗ ಕುಂದಾಪುರ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಬಂದರೆ ನೀವು ಗಮನಿಸಬಹುದು. ವೈದ್ಯರು, ದಾದಿಯರು, ಸಿಬ್ಬಂದಿಗಳು, ಮಾಮೂಲಾಗಿಯೇ ಓಡಾಡುತ್ತಾರೆ. ಇತರ ರೋಗಿಗಳನ್ನು ಗಮನಿಸುವಂತೆ ಶುಶ್ರೂಶೆ ಮಾಡುತ್ತಾರೆ. ನಮ್ಮಲ್ಲಿ ಐಸಿಯುನಲ್ಲಿದ್ದ ಐವರನ್ನು ಸಹ ವಾರ್ಡ್ಗಳಿಗೆ ಸೇರಿಸಲಾಗಿದೆ” ಎಂದರು.
ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಕೊರೊನಾ ವೈರಸ್ ಬಗ್ಗೆ ವಿವರಣೆ ನೀಡಿದರು.
ಕೊರೊನಾ ಎನ್ನುವ ಸೂಕ್ಷ್ಮ ವೈರಸ್ ಸಾವಿರಾರು ವರ್ಷಗಳ ಹಿಂದೆಯೇ ಭೂಮಿಯ ಮೇಲೆ ಇದೆ. ಈ ವೈರಸ್ ರೂಪ ಬದಲಿಸಿ ಹೊಸ ಗುಣಲಕ್ಷಣಗಳೊಂದಿಗೆ ಬಂದಿರುವುದರಿಂದ ಮನುಷ್ಯನ ದೇಹಕ್ಕೆ ಇದರ ಪರಿಚಯವಿಲ್ಲ. ಹಾಗಾಗಿ ಸಮಸ್ಯೆಯಾಗಿದೆ. ಆರೋಗ್ಯವಂತ ದೇಹದಲ್ಲಿ ಇದು ಬಂದು ಹೋದದ್ದೇ ತಿಳಿಯುವುದಿಲ್ಲ. ಸೋಂಕು ಹರಡುವಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಕೋವಿಡ್ ನಿಯಮದಂತೆ ಜಾಗೃತೆ ವಹಿಸಿದರೆ ಸೋಂಕು ತಗಲುವ ಸಾಧ್ಯತೆ ಕಡಿಮೆ” ಎಂದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಾ.ಉತ್ತಮ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಯು.ಎಸ್.ಶೆಣೈ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಕೆ.ಟಿ.ಸುರೇಂದ್ರನಾಥ್ ಶ್ರೀಧರ್ ಶೆಟ್ಟಿ, ಕೆಪಿಭಟ್, ಜರಾಲ್ಡ್ ಕ್ರಾಸ್ಟಾ, ದಿನಕರ ಶೆಟ್ಟಿ, ಅನಿಲ್ ಚಾತ್ರ, ವಿವಿಯನ್ ಕ್ರಾಸ್ತಾ ಓಝಲಿನ್ , ಸಂವಾದದಲ್ಲಿ ಪಾಲ್ಗೊಂಡರು.
ಕಾರ್ಯದರ್ಶಿ ಜುಡಿತ್ ಮೆಂಡೊನ್ಸಾ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಸೀತಾರಾಮ ನಕ್ಕತ್ತಾಯ ವಂದಿಸಿದರು.