ಕೋಲಾರ ತೆರಿಗೆದಾರರ ರಕ್ಷಣೆ ಆಸ್ತಿಗಳ ಸಂರಕ್ಷಣಾ ಕ್ಷೇಮಾಭಿವೃದ್ಧಿ ಸಮಿತಿ ಸಭೆಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಮಿತಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕೋಲಾರ ತೆರಿಗೆದಾರರ ರಕ್ಷಣೆ ಆಸ್ತಿಗಳ ಸಂರಕ್ಷಣಾ ಕ್ಷೇಮಾಭಿವೃದ್ಧಿ ಸಮಿತಿ ಸಭೆಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಮಿತಿ

 

 

ಕೋಲಾರ : ನಗರಸಭೆಯಲ್ಲಿನ ಅಧಿಕಾರಿಗಳು ಕಾನೂನು ಬಾಹಿರ ಮತ್ತು ಭ್ರಷ್ಠಾಚಾರಗಳಲ್ಲಿ ಭಾಗಿಯಾದರೆ ನೇರ ನಿಷ್ಠೂರವಾಗಿ ಯಾವುದೇ ಮುಲಾಜಿಲ್ಲದೆ ಲೋಕಾಯುಕ್ತ ಅಥವಾ ಎ.ಸಿ.ಬಿ. ಬಲೆಗೆ ಹಿಡಿದುಕೊಡಲಾಗುವುದು. ಅಧಿಕಾರಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಮಿತಿಮೀರಿ ವರ್ತಿಸಿದರೆ ಕಾನೂನಿನ ಮೂಲಕ ಪಾಠ ಕಲಿಸಲಾಗುವುದೆಂದು ನಗರಸಭಾ ಮಾಜಿ ಉಪಾಧ್ಯಕ್ಷ ವಿ.ಕೆ. ರಾಜೇಶ್ ತಿಳಿಸಿದರು.
ಪತ್ರಕರ್ತರವ ಭವದಲ್ಲಿ ತೆರಿಗೆದಾರರ ರಕ್ಷಣೆ, ಆಸ್ತಿಗಳ ಸಂರಕ್ಷಣೆ, ನಗರ ಮತ್ತು ಜನರ ಹಿತಕ್ಕಾಗಿ ನಡೆದ ಸಭೆಯಲ್ಲಿ ಮಾತನಾಡಿದರು.
ನಗರಸಭೆಯಲ್ಲಿ ಟ್ಯಾಂಕರ್ ಮಾಫಿಯಾವನ್ನು ಬೆಳೆಸದೆ ಹಾಲಿ ಇರುವ ಪಂಪ್‍ಹೌಸ್ ಮತ್ತು ಕೊಳವೆ ಬಾವಿಗಳನ್ನು ಅಭಿವೃದ್ಧಿಪಡಿಸಿ ಪೈಪ್‍ಲೈನ್ ಮೂಲಕ ನೀರನ್ನು ಹರಿಸಬೇಕು ಹಾಗೂ ನಗರಸಭೆಯಲ್ಲಿ ಅಕ್ರಮ ಖಾತೆಗಳಿಗೆ ಕಡಿವಾಣ ಹಾಕಬೇಕು. ನಗರದ ಉದ್ಯಾನವನ, ಸಿ.ಎ.ಸೈಟ್, ನಗರಸಭೆಯ ನಿವೇಶನಗಳನ್ನು ಖಾತೆ ಮಾಡದೆ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು, ಅಕ್ರಮ ಬಿಲ್ಲುಗಳಿಗೆ ಕಡಿವಾಣ ಹಾಕಬೇಕಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥಮಾಡದೆ ಹಣವನ್ನು ಸೂಕ್ತವಾಗಿ ಬಳಸಬೇಕು. ಬ್ರೋಕರ್‍ಗಳ ಹಾವಳಿಯನ್ನು ನಿಯಂತ್ರಿಸಿ ಸಾರ್ವಜನಿಕರಿಗೆ ಮುಕ್ತವಾಗಿ ಕೆಲಸವಾಗುವಂತೆ ಅಧಿಕಾರಿಗಳು ಗಂಭೀರವಾಗಿ ಯೋಚಿಸಬೇಕು. ಕಳಪೆ ಕಾಮಗಾರಿಗಳನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಕೋಲಾರ ತೆರಿಗೆ ದಾರರ ರಕ್ಷಣೆ, ಆಸ್ತಿಗಳ ಸಂರಕ್ಷಣೆ ಕ್ಷೇಮಾಭಿವೃದ್ಧಿ ಸಮಿತಿ ಕಾನೂನಿನ ಮೂಲಕ ಚಾಟಿ ಬೀಸಲು ಸಜ್ಚಾಗಿದೆ ಎಂದರು.
ಮುಖಂಡÀ ಕೆ.ವಿ. ಸುರೇಶ್ ಕುಮಾರ್ ಮಾತನಾಡಿ ನಗರಸಭೆಯಲ್ಲಿ ಭ್ರಷ್ಠರಿಗೆ ಅಂಕುಶ ಹಾಕಲು ಸಮಿತಿಯು ಎಲ್ಲಾ ರೀತಿಯಿಂದಲೂ ಸಿದ್ಧವಾಗಿದ್ದು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅವ್ಯವಹಾರಗಳಲ್ಲಿ ತೊಡಗದೆ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸಿದರೆ ಉತ್ತಮ. ಇಲ್ಲವಾದಲ್ಲಿ ಅಕ್ರಮಗಳಿಗೆ ಕಾನೂನಿನ ಮೂಲಕ ಕಡಿವಾಣ ಹಾಕಲು ಸಿದ್ಧರಿದ್ದು, ಕಾನೂನು ಹೋರಾಟ, ನ್ಯಾಯಾಂಗದ ಹೋರಾಟಗಳು ಇನ್ನು ಮುಂದೆ ಮುಂದುವರೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ನಗರಸಭೆಯಲ್ಲಿ ಕೆಲಸವಾಗಲು ಅಧಿಕಾರಿಗಳು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗಿದೆ ಎಂದರು.
ಮುಖಂಡ ಮುಜೀಬ್ ಪಾಷ ಮಾತನಾಡಿ ನಗರದ ಮತದಾರರು ಅಭಿವೃದ್ದಿ ಮತ್ತು ನಗರದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿಕೊಳ್ಳದೆ ಮತದಾನ ಚಲಾಯಿಸಿ ಪ್ರಮಾದವೆಸಗಿದ್ದಾರೆ. ಇದರ ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ನಗರ ಅದೋಗತಿಯ ಹಾದಿಯಲ್ಲಿ ಸಾಗುವುದು ಖಚಿತವಾಗಿದ್ದು, ಅಸ್ತವ್ಯಸ್ತ ಸಮಾಜವನ್ನು ಸರಿಮಾಡುವುದು ನಮ್ಮೆಲ್ಲರ ಕರ್ತವ್ಯ. ರಾಜಕೀಯ ವ್ಯಾಪಾರೀಕರಣವಾಗಿದ್ದು, ಒಂದು ಟ್ಯಾಂಕರ್ ನೀರು ಹೊಡೆದು ಆರು ಟ್ಯಾಂಕರ್ ಬಿಲ್ ಮಾಡಿಕೊಳ್ಳುವ ಮನೋಭಾವನೆ ಉಳ್ಳವರಿಂದ ನಗರಸಭೆ ಲೂಟಿ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಸಭೆಯಲ್ಲಿ ವಕೀಲ ವೆಂಕಟೇಶ್, ವೆಂಕಟಕೃಷ್ಣ, ಚಂಬೆ ರಾಜೇಶ್, ಕನ್ನಡಮಿತ್ರ ವೆಂಕಟಪ್ಪ, ಗಲ್‍ಪೇಟೆ ಕೆ.ಸಿ. ಸಂತೋಷ್, ಡಿ.ಜೆ. ಮನೋಹರ್ ಮತ್ತಿತರರು ಮಾತನಾಡಿದ ಈ ಸಂದರ್ಭದಲ್ಲಿ ವಿಶ್ವನಾಥ್, ಬುಲೆಟ್ ಬಾಬು, ರಂಜಿತ್, ರವಿ, ಆನಂದ್, ಲಕ್ಷ್ಮಣ್, ಮುನಿರಾಜು, ಶ್ರೀನಾಥ್, ಅಯೂಬ್, ಕೀಲುಕೋಟೆ ಹರೀಶ್ ಮತ್ತಿತರರು ಭಾಗವಹಿಸಿದ್ದರು.