ಕೋಲಾರ ಜಿಲ್ಲೆಯ ಹೈನೋದ್ಯಮ ಉಳಿಸಲು ಸಹಕಾರ ನೀಡಿ ಪ್ರತಿ ರಾಸಿಗೂ ಕಾಲುಬಾಯಿಜ್ವರ ಲಸಿಕೆ ಹಾಕಿಸಿ-ಡಾ.ಶ್ರೀನಿವಾಸಗೌಡ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಕೋಲಾರ ಜಿಲ್ಲೆಯ ಹೈನೋದ್ಯಮ ಉಳಿಸಲು ಸಹಕಾರ ನೀಡಿ ಪ್ರತಿ ರಾಸಿಗೂ ಕಾಲುಬಾಯಿಜ್ವರ ಲಸಿಕೆ ಹಾಕಿಸಿ-ಡಾ.ಶ್ರೀನಿವಾಸಗೌಡ

ಕೋಲಾರ:- ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಿಸಿ ಜಿಲ್ಲೆಯ ಹೈನೋದ್ಯಮ ಉಳಿಸಿ ಎಂದು ತಾಲ್ಲೂಕಿನ ಸುಗಟೂರು ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಶ್ರೀನಿವಾಸಗೌಡ ಕರೆ ನೀಡಿದರು.
ಭಾನುವಾರ ತಾಲ್ಲೂಕಿನ ಚಿಟ್ನಹಳ್ಳಿಯಲ್ಲಿ 16ನೇ ಸುತ್ತಿನ ಕೇಂದ್ರ ಪುರಸ್ಕøತ ಕಾಲು ಬಾಯಿಜ್ವರದ ವಿರುದ್ದದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಾಲು ಬಾಯಿ ಜ್ವರ ರಾಸುಗಳಿಗೆ ಅತ್ಯಂತ ಮಾರಕವಾಗಿದ್ದು, ಇದರ ನಿಯಂತ್ರಣ ಅಗತ್ಯವಾಗಿದೆ ಎಂದ ಅವರು, ರೈತರು ತಪ್ಪದೇ ಪ್ರತಿ ರಾಸಿಗೂ ಲಸಿಕೆ ಹಾಕಿಸಬೇಕು ಯಾವುದೇ ಮೂಢನಂಬಿಕೆಗೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಕೋಲಾರ ಜಿಲ್ಲೆ ಬರಪೀಡಿತವಾಗಿದ್ದರೂ, ಇಲ್ಲಿನ ಜನತೆ ಆರ್ಥಿಕವಾಗಿ ಉಸಿರಾಡಲು ಹೈನೋದ್ಯಮವೇ ಕಾರಣವಾಗಿದೆ, ಈ ಉದ್ಯಮಕ್ಕೆ ಯಾವುದೇ ತೊಂದರೆಯಾದರೆ ಜಿಲ್ಲೆಯ ಜನತೆ ಸಂಕಷ್ಟಕ್ಕೀಡಾಗುತ್ತಾರೆ ಎಂದ ಅವರು, ರೈತರು ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ವಿರುದ್ದದ ಲಸಿಕೆ ಹಾಕಿಸುವ ಮೂಲಕ ರಾಸುಗಳನ್ನು ರಕ್ಷಿಸಿ ಎಂದು ಕೋರಿದರು.
ಜಿಲ್ಲೆಯಲ್ಲಿ 10 ಲಕ್ಷ ಲೀಟರ್‍ಗೂ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ, ರಾಜ್ಯದಲ್ಲೇ ಹಾಲು ಸಂಗ್ರಹಣೆಯಲ್ಲಿ ನಾವು ದ್ವಿತೀಯ ಸ್ಥಾನದಲ್ಲಿದ್ದೇವೆ ಎಂದ ಅವರು, ಈ ಉದ್ಯಮವೇ ಇಲ್ಲಿನ ಬಡಕುಟುಂಬಗಳ ಜೀವಾಳವಾಗಿದೆ ಎಂದರು.
ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂಬುದರ ಕುರಿತು ಗ್ರಾಮೀಣ ಪ್ರದೇಶದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿ,ಸಿಬ್ಬಂದಿ ಗ್ರಾಮಗಳಲ್ಲಿ ಅರಿವುಮೂಡಿಸುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಪಶುವೈದ್ಯಕೀಯ ಇಲಾಖೆ ಜಿಲ್ಲಾದ್ಯಂತ ಕಾಲುಬಾಯಿ ಜ್ವರದ 16ನೇ ಸುತ್ತಿನ ಲಸಿಕಾ ಕಾರ್ಯ ನಡೆಸುತ್ತಿದೆ, ಸುಗಟೂರು ಹೋಬಳಿಯಲ್ಲಿ ಲಸಿಕಾ ಅಭಿಯಾನವನ್ನು ಆಂದೋಲನದ ಮಾದರಿಯಲ್ಲಿ ಆರಂಭಿಸಿದ್ದು, ಶೀಘ್ರ ಎಲ್ಲಾ ರಾಸುಗಳಿಗೂ ಲಸಿಕೆ ಹಾಕುವುದಾಗಿ ತಿಳಿಸಿದರು.
ಅಭಿಯಾನದಲ್ಲಿ ಸುತ್ತಮುತ್ತಲ ಗ್ರಾಮಗಳ ಸುಮಾರು 3 ಸಾವಿರ ರಾಸುಗಳಿಗೆ ಲಸಿಕೆ ಹಾಕಿದ್ದು, ಲಸಿಕಾ ಕಾರ್ಯದಲ್ಲಿ ಡಾ.ಕೆ.ಎನ್.ಮಂಜುನಾಥರೆಡ್ಡಿ, ಡಾ.ಪ್ರಭಾಕರ್,ಡಾ.ಶ್ರೀನಾಥರೆಡ್ಡಿ, ಡಾ.ನಿತ್ಯಾನಂದ, ಡಾ.ನಿತಿನ್,ಡಾ.ವಿನಯ್, ಡಾ.ಚಂದ್ರಶೇಖರರೆಡ್ಡಿ, ಡಾ.ಲಲಿತ್, ಡಾ. ವಿ.ಎನ್.ಮಂಜುನಾಥ್, ಡಾ.ಸೀಮಂತಿನಿ, ಡಾ.ಕೆ.ಎಂ.ದೀಪ್ತಿ, ಡಾ.ಅಶ್ವಾಕ್ ಅಹಮದ್ ಲಸಿಕೆ ಕಾರ್ಯ ನಿರ್ವಹಿಸಿದರು.
ಲಸಿಕೆ ಅಭಿಯಾನದ ಯಶಸ್ಸಿಗೆ ಸಿಬ್ಬಂದಿ ದೇವರಾಜ್, ಮಜರ್ ಅಹಮದ್, ವಜೀರ್ ಅಹಮದ್, ಜ್ಯೋತಿ, ರತ್ನಕುಮಾರಿ, ಹನುಮಪ್ಪ, ಎಸ್.ಎನ್.ಮಂಜುನಾಥ್, ಕಾಂತರಾಜು, ಚಿಟ್ನಹಳ್ಳಿಯ ಡೈರಿಯ ಪುಟ್ಟಣ್ಣ, ಸಿ.ಎಲ್.ಪುರುಷೋತ್ತಮ್, ಆನಂದ್ ಮತ್ತಿತರ ಗ್ರಾಮಸ್ಥರು ಸಹಕಾರ ನೀಡಿದರು.