ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಕೃಷಿಯಲ್ಲಿ ತೊಡಗಿರುವ ರೈತ ಮಹಿಳೆಯರಿಗೂ ಭೂಮಿಯ ಹಕ್ಕನ್ನು ನೀಡಬೇಕೆಂದು ರೈತಸಂಘದಿಂದ ತಾಲೂಕಿನ ಹೊಸಮಟ್ನಹಳ್ಳಿಯಲ್ಲಿ ರೈತ ಮಹಿಳೆಯರಿಗೆ ಗಿಡ ಮತ್ತು ಹರಿಶಿನ, ಕುಂಕುಮ ನೀಡಿ ಅಂತರಾಷ್ಟ್ರೀಯ ರೈತ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿದ್ದರೂ ರೈತರು ತಾವು ಬೆಳೆದಂತಹ ಬೆಳೆಗಳಿಗೆ ಬೆಲೆಗಳನ್ನು ನಿಗಧಿಪಡಿಸುವ ಹಕ್ಕು ಇನ್ನೂ ಬಾರದೇ ಇರುವುದು ವಿಷಾಧದ ಸಂಗತಿ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಶೇ.80ರಷ್ಟು ಮಹಿಳೆಯರೇ ವ್ಯವಸಾಯ, ಹೈನೋದ್ಯಮ, ಜೇನು ಸಾಕಾಣಿಕೆ ಸೇರಿದಂತೆ ನಾನಾ ಕಸುಬುಗಳಲ್ಲಿ ತೊಡಗಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರ ಎಂದರೆ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂದು ಸರ್ಕಾರಗಳು ತಿಳಿದುಕೊಂಡಿದ್ದು, ಉಳುವವನಿಗೆ ಭೂಮಿಯ ಒಡೆತನ ಇರುವಂತೆಯೇ ಬಿತ್ತುವಾಕೆಗೂ ಭೂಮಿಯ ಒಡೆತನ ನೀಡಬೇಕು. ಕೃಷಿರಂಗದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಅವಶ್ಯಕತೆಯಿರುವ ಸಾಲ, ಬಿತ್ತನೆಬೀಜ, ರಸಗೊಬ್ಬರಗಳ ಪೂರೈಕೆಗೆ ಸಮಾನ ಅವಕಾಶ ಕಲ್ಪಿಸಲು ಸರ್ಕಾರಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹುಲ್ಲೇಗೌಡ, ನಾಗರಾಜ್, ಕರ್ಣ, ರೈತ ಮಹಿಳೆಯರಾದ ವೆಂಕಟಮ್ಮ, ಶಿಲ್ಪ, ಪಾಪಮ್ಮ, ವಿ.ನಳಿನಿ, ಸುನಿತಾಗೌಡ, ಮತ್ತಿತರರು ಉಪಸ್ಥಿತರಿದ್ದರು.