ಕೋಲಾರ ಎಪಿಎಂಸಿ ಜಾಗದ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಡ ಹಾಕಲು ಜಾನುವಾರುಗಳ ಸಮೇತ ಸಂಸದರ ಮನೆ ಮುಂದೆ ಹೋರಾಟಕ್ಕೆ ರೈತ ಸಂಘ ತೀರ್ಮಾನ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಕೋಲಾರ ಎಪಿಎಂಸಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲು ಜಾನುವಾರುಗಳ ಸಮೇತ ಆ.28 ರ ಶುಕ್ರವಾರ ಸಂಸದರ ಮನೆ ಮುಂದೆ ಹೋರಾಟ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿನ ಟೊಮೆಟೊ ಮತ್ತು ತರಕಾರಿಗಳು ದೇಶವಿದೇಶಗಳಿಗೆ ರಫ್ತಾಗುತ್ತಿದ್ದು ಇಲ್ಲಿಗೆ ಬರುವ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆಯಿಂದ ಬೆಳೆಗೆ ತಕ್ಕ ಬೆಲೆ ನೀಡಲು ಹಿಂಜರಿಯುತ್ತಿದ್ದಾರೆ.

ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದೆ ನಷ್ಟಕ್ಕೆ ಸಿಲುಕುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಮಾರುಕಟ್ಟೆಯ ಜಾಗದ ಸಮಸ್ಯೆ ಬಗ್ಗೆ ನೆಪ ಮಾತ್ರಕ್ಕೆ ಬಗೆಹರಿಸುತ್ತೇವೆಂದು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಸತತವಾಗಿ 8 ವರ್ಷಗಳಿಂದ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಪರಿಹರಿಸುವಂತೆ ಸತತವಾಗಿ ಹೋರಾಟಗಳು ಮಾಡುತ್ತಿದ್ದರೂ ಇದರ ಕಡೆ ಗಮನಹರಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ರೈತರಿಗೆ ಅನುಕೂಲವಾಗುವ ಮಾರುಕಟ್ಟೆಯ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಬಳಿ ಜಾಗದ ಸಮಸ್ಯೆ ಇದೆ. ಆದರೆ ರಾತ್ರೋರಾತ್ರಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಅಕ್ರಮ ದಾಖಲೆಗಳನ್ನು ಸೃಷ್ಠಿ ಮಾಡಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಂಜೂರು ಮಾಡಲು ಜಾಗವಿರುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಕಿಲೋಮೀಟರ್‍ಗಟ್ಟಲೇ ವರ್ಷಗಳ ಕಾಲ ಹುಡುಕಾಟದಲ್ಲಿದ್ದೇವೆಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಗೆ ಕೆಸಿವ್ಯಾಲಿ ನೀರು ಹರಿಯುವ ಜೊತೆಗೆ ಉತ್ತಮವಾದ ಮುಂಗಾರುಮಳೆ ಸುರಿಯುತ್ತಿರುವುದರಿಂದ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗಿ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದ ರೈತರು ಮತ್ತೆ ಕೃಷಿಯತ್ತ ಮುಖ ಮಾಡಿರುವುದರಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗಬೇಕಾದರೆ ಮಾರುಕಟ್ಟೆಯ ವ್ಯವಸ್ಥೆ ಸರಿಪಡಿಸಬೇಕಾದ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.

ಜೊತೆಗೆ ಇತ್ತೀಚಿನ ದಿನಗಳಲ್ಲಂತು ಟೊಮೆಟೊ ಸೇರಿದಂತೆ ಇನ್ನಿತರೆ ತರಕಾರಿಗಳ ಅವಕ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ನಿತ್ಯವೂ ಟ್ರಾಫಿಕ್, ಅನೈರ್ಮಲ್ಯ ಸಮಸ್ಯೆಗಳು ಸಾಮಾನ್ಯವಾಗಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆಗಳಿದ್ದರೂ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಮಾರಾಟವಾಗದೆ ಗುಣಮಟ್ಟ ಕಳೆದುಕೊಂಡು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ, ವಕ್ಕಲೇರಿ ಹನುಮಯ್ಯ, ಐತಾಂಡಹಳ್ಳಿ ಮಂಜುನಾಥ್, ವಿ.ನಳಿನಿ ಮತ್ತಿತರರು ಉಪಸ್ಥಿತರಿದ್ದರು.