ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೋನಾ ಸಂಕಷ್ಟದಲ್ಲಿ ಮಾವು ಮಾರುಕಟ್ಟೆಗೆ ಅವಕಾಶ ಬೇಡ ಶ್ರೀನಿವಾಸಪುರ ಮತ್ತೊಂದು ರೆಡ್ಝೋನ್ ಮಾಡದಿರಿ-ವೈ.ಎ.ಎನ್.
ಕೋಲಾರ: ಕೊರೋನಾದಿಂದ ಜನ ಈಗಾಗಲೇ ತತ್ತರಿಸಿದ್ದಾರೆ, ಇಂತಹ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಮಾವು ಮಾರಾಟಕ್ಕೆ ಅವಕಾಶ ನೀಡಿ ಶ್ರೀನಿವಾಸಪುರವನ್ನು ಮತ್ತೊಂದು ರೆಡ್ಝೋನ್ ಮಾಡದಿರಿ ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು.
ಶುಕ್ರವಾರ ಸಂಜೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಾವು ಬೆಳೆಯುವುದರಲ್ಲಿ ಶ್ರೀನಿವಾಸಪುರ ತಾಲ್ಲೂಕಿಗೆ ವಿಶಿಷ್ಟತೆ ಇದೆ, ಇಲ್ಲಿ 25 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತದೆ ಎಂದು ತಿಳಿಸಿದರು.ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟು ಆರಂಭಿಸಿದ್ದೇ ಆದಲ್ಲಿ ದೇಶದ ವಿವಿಧ ರಾಜ್ಯಗಳಿಂದ 6 ಸಾವಿರ ಲಾರಿಗಳು ಬರಲಿವೆ, ಸಾವಿರಾರು ವರ್ತಕರು, ರೈತರು, ಲಾರಿ ಚಾಲಕರು,ಕ್ಲಿನರ್ಗಳು ಬರುವುದರಿಂದ ಇಲ್ಲಿ ಯಾವುದೇ ಮುಂಜಾಗ್ರತೆ ವಹಿಸಿದರೂ ಪ್ರಯೋಜವಾಗುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂಬಂಧ ಸಹಕಾರ ಸಚಿವರೊಂದಿಗೆ ಮಾತನಾಡಿದ್ದೇನೆ, ಮಾವು ವಹಿವಾಟಿಗೆ ಕೊರೋನಾ ಮುಂಜಾಗ್ರತೆ ವಹಿಸುವ ಕುರಿತು ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಬೇಕು, ಮಾವು ಬೆಳೆಗಾರರಿಗೆ ವಹಿವಾಟಿಗೆ ಸಂಬಂಧಿಸಿದಂತೆ ಸೂಕ್ತ ಸಂದೇಶ ಕಳುಹಿಸಬೇಕು ಎಂದು ಮನವಿ ಮಾಡಿದರು.ಹಲವಾರು ರೈತರು, ಕೂಲಿಕಾರರೇ ಮಂಡಿ ವಹಿವಾಟು ಬೇಡ ಎಂದಿದ್ದಾರೆ, ಆನ್ಲೈನ್ ಮೂಲಕ ವಹಿವಾಟು ನಡೆಸುವಂತೆ ಆಗ್ರಹಿಸಿದ್ದಾರೆ ಎಂದರು.
ಜ್ಯೂಸ್ ಕಾರ್ಖಾನೆಗಳಿಗೆಮಾರಾಟಕ್ಕೆ ಅವಕಾಶ
ರಾಜ್ಯ ತೋಟಗಾರಿಕಾ ಸಚಿವರೊಂದಿಗೆ ಮಾತನಾಡಿದ್ದು, ಶ್ರೀನಿವಾಸಪುರದಲ್ಲಿ ಶೇ.70ರಷ್ಟು ತೋತಾಪುರಿ ಅಂದರೆ ಜ್ಯೂಸ್ ಕಂಪನಿಗಳಿಗೆ ಹೋಗುವ ಮಾವು ಬೆಳೆಯುತ್ತಿದ್ದು, ಅವರು ನೇರ ಖರೀದಿ ಮಾಡಿದರೆ ಕೊರೋನಾ ಸಂಕಟದಿಂದ ಪಾರಾಗಬಹುದು ಈ ಸಂಬಂಧ ಒಪ್ಪಿಗೆ ಸಿಕ್ಕಿದೆ ಎಂದರು.
ಉಳಿದ ಮಾವನ್ನು ಹಾಪ್ಕಾಮ್ಸ್, ನಂದಿನಿ ಮಳಿಗೆಗಳ ಮುಂದೆಯೂ ಮಾರಲು ರೈತರಿಗೆ ಅನುಮತಿ ನೀಡಲಾಗುತ್ತದೆ, ಒಟ್ಟಾರೆ ಈ ಬಾರಿ ಫಸಲು ಬಂದಿರುವುದೇ ಶೇ.30 ರಷ್ಟಾಗಿರುವುದರಿಂದ ಎಪಿಎಂಸಿ ಮಾರಾಟ ಮಾಡಲು ಅವಕಾಶ ನೀಡಿ ಶ್ರೀನಿವಾಸಪುರವನ್ನು ಕೊರೋನಾ ರೆಡ್ ಝೋನ್ ಮಾಡಬಾರದು, ವರ್ತಕರೂ ಸಹಕಾರ ನೀಡಬೇಕು ಎಂದು ಕೋರಿದರು.
ಮಾವಿಗೂ ಫ್ಯಾಕೇಜ್ಇಲಾಖೆಗೆ ಮನವಿ
ಕೂಡಲೇ ಮಾವು ಬೆಳೆನಷ್ಟದ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ತೋಟಗಾರಿಕಾ ಇಲಾಖೆಗೆ ಸೂಚಿಸಿದ್ದು, ಈ ಸಂಬಂಧ ಸಿಎಂ ಜತೆ ಮಾತನಾಡಿ ಮಾವಿಗೂ ವಿಶೇಷ ಫ್ಯಾಕೇಜ್ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.ದೇಶದ ಯಾವುದೇ ಸಿಎಂ ಮಾಡದ ಕೆಲಸ ಯಡಿಯೂರಪ್ಪ ಮಾಡಿದ್ದಾರೆ, ರೈತರು,ಕಾರ್ಮಿಕರು, ಅಗಸರು ಸೇರಿದಂತೆ ಪ್ರತಿಯೊಬ್ಬರಿಗೂ ಪ್ಯಾಕೇಜ್ ನೀಡಿ ಲಾಕ್ಡೌನ್ ಸಂಕಟಕ್ಕೆ ಸ್ಪಂದಿಸಿದ್ದಾರೆ ಎಂದರು.ತರಕಾರಿ,ಹೂಗೂ ಬೆಂಬಲ ಬೆಲೆ ನೀಡಿದ್ದಾರೆ, ವಿಶ್ವದಲ್ಲೇ ಯಾವುದೇ ದೇಶ ಮಾಡದ ಸಾಧನೆ ನಮ್ಮ ಪ್ರಧಾನಿ ಮಾಡಿ ತೋರಿಸಿದ್ದು, 20 ಲಕ್ಷ ಫ್ಯಾಕೇಜ್ ನೀಡಿದ್ದಾರೆ ಎಂದರು.
ಖಾಸಗಿ ಶಿಕ್ಷಕರಿಗೂಫ್ಯಾಕೇಜ್ ನೀಡಿ
ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಶುಲ್ಕ ವಸೂಲಿ ಮಾಡಬಾರದು ಎಂದು ಹೇಳಿರುವುದರಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ, ಸಂಕಷ್ಟದಲ್ಲಿರುವ ಈ ಶಿಕ್ಷಕರಿಗೂ ಸರ್ಕಾರ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂದುಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಪದವೀಧರರ ಕ್ಷೇತ್ರಚಿದಾನಂದಗೌಡ ಅಭ್ಯರ್ಥಿ
ಆಗ್ನೇಯ ಪದವೀಧರರ ಕ್ಷೇತ್ರದಿಂದ ಈ ಬಾರಿ ಶಿರಾದ ಚಿದಾನಂದ ಎನ್.ಗೌಡ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ, ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ಅವರನ್ನು ಗೆಲ್ಲಿಸಿಕೊಡಲು ಮನವಿ ಮಾಡಿದ ಅವರು, ಪದವೀಧರರ ಸಂಕಷ್ಟ ಅರಿತಿರುವ ಅವರ ಆಯ್ಕೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಅಭ್ಯರ್ಥಿ ಚಿದಾನಂದ ಎನ್.ಗೌಡ ಜಿಲ್ಲೆಯಲ್ಲಿ 5 ಸಾವಿರ ಮಾಸ್ಕ್ ವಿತರಿಸಿ ಮಾತನಾಡಿ, ತಾವು ಶಿರಾ ಮತ್ತು ಬೆಂಗಳೂರಿನಲ್ಲಿ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದು, ಶಿಕ್ಷಕರು,ಪದವೀಧರರ ಸಂಕಷ್ಟಗಳ ಅರಿವಿದೆ ಎಂದರು.
ಬಿಜೆಪಿ ವರಿಷ್ಟರು ತನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ್ದು, ಕೊರೊನಾ ಹಿನ್ನಲೆಯಲ್ಲಿ ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ ಎಂದರು.ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಮುಖಂಡರಾದ ಡಾ.ಚಂದ್ರಶೇಖರರೆಡ್ಡಿ, ಮಾಗೇರಿ ನಾರಾಯಣಸ್ವಾಮಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಎಸ್.ಮುನಿಯಪ್ಪ, ಬಿಜೆಪಿ ಮಹಿಳಾ ಮೋರ್ಚಾದ ಮಮತಾ, ಅಪ್ಪಿಗೌಡ ಮತ್ತಿತರರು ಉಪಸ್ಥಿತರಿದ್ದರು.