ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗಧಿಪಡಿಸಿದ ಧರ ರದ್ದು ಪಡಿಸಲು ರೈತಸಂಘದಿಂದ ಒತ್ತಾಯ
ಕೋಲಾರ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗಧಿಪಡಿಸಿರುವ ಖಾಸಗಿ ಧರವನ್ನು ರದ್ದುಪಡಿಸಿ ತಾರತಮ್ಯ ಕೈಬಿಟ್ಟು, ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಎಲ್ಲರಿಗೂ ಉಚಿತವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಬೇಕೆಂದು ರೈತಸಂಘದಿಂದ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಮಾನ್ಯ ತಹಶೀಲ್ದಾರ್‍ರವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸರ್ಕಾರ ಪ್ರತಿ ಹೊಸ ವೈರಾಣು ಬಂದಾಗ ವಿವಿಧ ಆರೋಗ್ಯ ಸೌಲಭ್ಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತಾರೆ. ಆದರೆ ಇವುಗಳ ಉಪಯೋಗ ಖಾಸಗಿ ಆಸ್ಪತ್ರೆಗಳಿಗೆ ಹೊರತು ಯಾವುದೇ ರೋಗಿಗೆ ಅನುಕೂಲವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೋಗಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಸರ್ಕಾರಿ ಕೆಲವು ಅಧಿಕಾರಿಗಳು ಮತ್ತು ಆಸ್ಪತ್ರೆಯ ಮಾಲೀಕರು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಲೂಟಿ ಮಾಡುತ್ತಿರುವುದು ಹೊಸದೇನಲ್ಲ. ಜೊತೆಗೆ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ದಿನೇದಿನೇ ಹೆಚ್ಚಾಗುವ ಜೊತೆಗೆ ಸಮುದಾಯದತ್ತ ಕಾಲಿಟ್ಟಿರುವುದು ಸರ್ಕಾರಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ನುಂಗಲಾರದ ತುತ್ತಾಗಿದೆ.
ಈಗಾಗಲೇ ಈ ವೈರಸ್ ಹಾವಳಿಯಿಂದ ರೈತರು, ಕೃಷಿ ಕೂಲಿ ಕಾರ್ಮಿಕರು ಕೆಲಸಗಳಿಲ್ಲದೆ ಆದಾಯದ ಮೂಲವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿರುವ ಸಮಯದಲ್ಲಿ ಸರ್ಕಾರ ಬಡವರ ಕೈಹಿಡಿಯುವುದನ್ನು ಬಿಟ್ಟು ಕೊರೊನಾ ವೈರಸ್ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ಹೆಸರಿನಲ್ಲಿ ಬಡವರ ಜೊತೆ ಚೆಲ್ಲಾಟವಾಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಆದೇಶ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಸರ್ಕಾರ ಈಗಾಗಲೇ ನೊಂದಿರುವ ಜನರ ಜೀವನದಲ್ಲಿ ಕಣ್ಣಿಗೆ ಕಾಣದ ವೈರಸ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಮೂರು ಹಂತದಲ್ಲಿ 3.80 ಲಕ್ಷ, 2.80 ಲಕ್ಷ, 1.60 ಲಕ್ಷರೂಗಳನ್ನು ನಿಗಧಿ ಮಾಡಿರುವ ಪಟ್ಟಿಯನ್ನು ನೋಡಿದರೆ ಕೊರೊನಾ ಸೋಂಕಿತರು ರೋಗದಿಂದ ಮೃತಪಡುವ ಬದಲು ಆತಂಕಕ್ಕೆ ಒಳಗಾಗಿ ಮೃತಪಡುವ ಸಾಧ್ಯತೆಗಳಿವೆ.
ಧರದ ಪಟ್ಟಿಯೇ ಜನ ಸಾಮಾನ್ಯರಿಗೆ ಹೊರೆಯಾಗುವಂತಿದ್ದು, ಅದರಲ್ಲೂ ಚಿಕಿತ್ಸೆಗೆ ಎಪಿಎಲ್, ಬಿಪಿಎಲ್ ಎಂದು ತಾರತಮ್ಯ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಗುಂಡು ಸೂಜಿ ಚುಚ್ಚಿಕೊಂಡರೂ ಲಕ್ಷ ಬಿಲ್ ಮಾಡುವ ಆಸ್ಪತ್ರೆಗಳು ಇವೆ. ಇಂತಹ ಸಮಯದಲ್ಲಿ ಕೊರೊನಾ ಚಿಕಿತ್ಸೆ ಹೆಸರಿನಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುವುದಿಲ್ಲ ಎನ್ನುವುದು ಯಾವ ಗ್ಯಾರೆಂಟಿ.ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿಗಧಿ ಮಾಡಿರುವ ಖಾಸಗಿ ಧರವನ್ನು ಸಂಪೂರ್ಣವಾಗಿ ರದ್ದು ಮಾಡಿ ಇಲ್ಲವೆ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಕಡ್ಡಾಯವಾಗಿ ಪ್ರತಿ ಸೋಂಕಿತರಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಕಲ್ಪಿಸಬೇಕು ಮತ್ತು ಎಪಿಎಲ್, ಬಿಪಿಎಲ್ ಕಾರ್ಡ್‍ದಾರರ ಕೈಬಿಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶೋಬಿತರವರು ಆಯುಷ್‍ಮಾನ್ ಕಾರ್ಡ್ ಇರುವವರು ಕೋರೋನಾ ವೈರಸ್‍ಗೆ ಚಿಕಿತ್ಸೆ ಪಡೆಯಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.ಮನವಿ ನೀಡುವಾಗ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ನಳಿನಿ.ವಿ ಮುಂತಾದವರಿದ್ದರು.