ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವಾ ಸಂಸ್ಥೆಗಳು ನೆರವಿಗೆ ಬರಬೇಕು:ರೋಟರಿಯನ್ ‌ಎಸ್‌.ಶಿವಮೂರ್ತಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವಾ ಸಂಸ್ಥೆಗಳು ಅವರ ನೆರವಿಗೆ ಬರಬೇಕು ಎಂದು ರೋಟರಿ ಸೆಂಟ್ರಲ್‌ ಶ್ರೀನಿವಾಸಪುರ ಅಧ್ಯಕ್ಷ ಎಸ್‌.ಶಿವಮೂರ್ತಿ ಹೇಳಿದರು.
  ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಸೆಂಟ್ರಲ್‌ ಶ್ರೀನಿವಾಸಪುರ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿ, ಕೊರೊನಾ ಭಯದ ನಡುವೆ ಸೈನಿಕರಂತೆ ಪತ್ರಿಕಾ ವಿತರಕರು ಮನೆ ಮನೆಗೆ ತೆರಳಿ ಪತ್ರಿಕೆ ವಿತರಿಸುತ್ತಿದ್ದಾರೆ. ಅವರ ಧೈರ್ಯ ಹಾಗೂ ಸಮಾಜ ಮುಖಿ ಸೇವೆ ಶ್ಲಾಘನೀಯ ಎಂದು ಹೇಳಿದರು.
  ಸಂಸ್ಥೆಯ ನಿರ್ದೇಶಕ ಎಂ.ಬೈರೇಗೌಡ ಮಾತನಾಡಿ, ಪತ್ರಕಾ ವಿತರಕರು ತಮ್ಮ ಕರ್ತವ್ಯ ನಿಷ್ಟೆಯಿಂದ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಯಾವುದೇ ಸಂದರ್ಭದಲ್ಲಿ ಅವರು ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಮೂಲಕ ಜ್ಞಾನ ಪ್ರಸರಣ ಮಾಡುತ್ತಿದ್ದಾರೆ. ಅವರಿಗೆ ಸಹಾಯ ಹಸ್ತ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
  ಸಮಾರಂಭದಲ್ಲಿ 30 ಪತ್ರಿಕಾ ವಿತರಕರಿಗೆ ದಿನಸಿ ಕಿಟ್‌ ವಿತರಿಸಲಾಯಿತು. 
  ಸಂಸ್ಥೆಯ ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯರಾದ ಆನಂದ್‌ ಶಶಿಕಲಾ ಇದ್ದರು.