ಕೊರೊನಾ ಲಾಕ್‍ಡೌನ್ ಹಿನ್ನೆಲೆ ಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ

JANANUDI.COM NERWORK
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೊರೊನಾ ಲಾಕ್‍ಡೌನ್ ಹಿನ್ನೆಲೆ ಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ

ಕೆಜಿಎಫ್: ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಕೆಜಿಎಫ್ ಪೊಲೀಸ್ ಜಿಲ್ಲೆಯ ಅಂತರರಾಜ್ಯ ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಅನವಶ್ಯಕ ವಾಹನಗಳ, ಜನಸಾಮಾನ್ಯರ ಓಡಾಟವನ್ನು ಸಂಪೂರ್ಣ ತಡೆಯಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.
ಮುಂದುವರೆದಂತೆ, ಕೆಜಿಎಫ್ ಪೊಲೀಸ್ ಜಿಲ್ಲೆಯು ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿದ್ದು, ಅಂತರರಾಜ್ಯ ವಾಹನಗಳು ಯಾವುದೂ ಒಳಬರದಂತೆ, ಹೊರಹೋಗದಂತೆ ತಪಾಸಣೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಜಿಎಫ್ ಸರಹದ್ದಿನ ರಾಜ್‍ಪೇಟ್‍ರೋಡ್, ವೆಂಕಟಾಪುರ, ಕೆಂಪಾಪುರ, ಜಕ್ಕರಸಕುಪ್ಪ, ತೊಪ್ಪನಹಳ್ಳಿ, ದೊಡ್ಡಪೊನ್ನಾಂಡಹಳ್ಳಿ, ಮರಾಠಹೊಸಹಳ್ಳಿ ಸೇರಿದಂತೆ 7 ಕಡೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ 12 ತಂಡಗಳನ್ನು ರಚಿಸಲಾಗಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿಭಾಗವಾದ ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್‍ಪೋಸ್ಟ್‍ಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಲಾಗಿದ್ದು, ವಿನಾಕಾರಣ ವಾಹನಗಳಲ್ಲಿ ಓಡಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಆದೇಶಕ್ಕೆ ಬದ್ದರಾಗಿ ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿರಲು ಜಿಲ್ಲಾ ಎಸ್‍ಪಿ ಮೊಹಮ್ಮದ್ ಸುಜೀತ ಅವರು ಕರೆ ನೀಡಿದ್ದಾರೆ.