ಕೊರೊನಾ ಲಾಕ್‍ಡೌನ್ ವೇಳೆ ಸರ್ಕಾರ ವಾಣಿಜ್ಯ ಬೆಳೆಗಳಿಗೆ ಘೋಷಣೆ ಮಾಡಿದ್ದ ಪರಿಹಾರ ಹಣ ಕೂಡಲೇ ಬಿಡುಗಡೆಗೆ, ತೋಟಗಾರಿಕೆ ಇಲಾಖೆಯಲ್ಲಿನ ಭ್ರಷ್ಟಾಚಾರ ಹಗರಣ ಸಿಬಿಐ ತನಿಖೆಗೆ ರೈತ ಸಂಘ ದೀಪಗಳೊಂದಿಗೆ ಪ್ರತಿಭಟನೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ಕೊರೊನಾ ಲಾಕ್‍ಡೌನ್ ವೇಳೆ ಸರ್ಕಾರ ಹೂ, ವಾಣಿಜ್ಯ ಬೆಳೆಗಳಿಗೆ ಘೋಷಣೆ ಮಾಡಿದ್ದ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡುವ ಜೊತೆಗೆ ತೋಟಗಾರಿಕೆ ಇಲಾಖೆಯಲ್ಲಿನ ಕೋಟ್ಯಾಂತರರೂಪಾಯಿ ಭ್ರಷ್ಟಾಚಾರ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ರೈತಸಂಘದಿಂದ ತೋಟಗಾರಿಕೆ ಕಚೇರಿಯೆದುರು ದೀಪಗಳೊಂದಿಗೆ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷಕೋಟಿ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿ ತಿಂಗಳಾನುಗಟ್ಟಲೇ ಕಳೆದರೂ ಇದುವರೆಗೂ ರಾಜ್ಯದ ಪಾಲು ನಯಾಪೈಸೆಯೂ ಬಂದಿಲ್ಲ.
ರೈತಪರ ಸರ್ಕಾರ ಎಂದು ಕೊರೊನಾ ಸಂಕಷ್ಟದಲ್ಲಿ ಬೆಳೆ ಮಾಡಿದ್ದ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದಿದ್ದ ಹೂ, ಟೊಮೆಟೊ, ಕ್ಯಾಪ್ಸಿಕಂ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ತೋಟಗಳಲ್ಲೇ ನಾಶಪಡಿಸಲಾಗಿತ್ತು.
ಬೆಳೆಗಳು ಉತ್ತಮವಾಗಿದ್ದರೂ ರೈತರು ಕೋಟ್ಯಂತರರೂಪಾಯಿ ನಷ್ಟವನ್ನು ಅನುಭವಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಹೂ ಬೆಳೆ ಪ್ರತಿ ಹೆಕ್ಟೇರ್‍ಗೆ 25 ಸಾವಿರ, ಟೊಮೆಟೊ, ಕ್ಯಾಪ್ಸಿಕಂಗೆ 18 ಸಾವಿರ ಪರಿಹಾರ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ರೈತರಿಗೆ ಪರಿಹಾರದ ಹಣ ಮರೀಚಿಕೆಯಾಗಿ ಪತ್ರಿಕಾ ಮಾದ್ಯಮಕ್ಕೆ ಸರ್ಕಾರ ಘೋಷಣೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ತೋಟಗಾರಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಷ್ಟಪಟ್ಟು ಬೆಳೆದಂತಹ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ಸರ್ಕಾರಕ್ಕೆ ನೀಡದ ಹಿನ್ನೆಲೆಯಲ್ಲಿ ರಾಜಕೀಯ ಬಲ ಇರುವ ರೈತರಿಗೆ ಕಾಂಗ್ರೆಸ್ ಗಿಡ, ನೀಲಗಿರಿ ಮತ್ತಿತರ ಬೆಳೆಯಿಲ್ಲದ ರೈತರಿಗೆ ಪರಿಹಾರ ಸಿಕ್ಕಿದೆ.
ಆದರೆ ಯಾವುದೇ ರಾಜಕೀಯ ಬಲವಿಲ್ಲದ ಅಮಾಯಕ ರೈತರು ಕಷ್ಟಪಟ್ಟು ಬೆಳೆದಿರುವ ಹೂ ಮತ್ತು ಕ್ಯಾಪ್ಸಿಕಂ, ಟೊಮೆಟೊ ಬೆಳೆಗಳ ಸಮೀಕ್ಷೆ ಸಮರ್ಪಕವಾಗಿ ನಡೆಸದ ಅಧಿಕಾರಿಗಳ ವೈಫಲ್ಯದಿಂದ ಸರ್ಕಾರದಿಂದ ಬರುವ ಪರಿಹಾರ ಹಣ ತೆಗೆದುಕೊಳ್ಳಲು ಇಲಾಖೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ ಎಂದು ದೂರಿದರು.
ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ರೈತರಿಗೆ ತಲುಪಿಸಬೇಕಾಗಿದೆ. ಹನಿನೀರಾವರಿಗೆ ಅವಶ್ಯಕತೆಯಿರುವ ಡ್ರಿಪ್ ಪೈಪ್‍ಗಳ ಏಜೆನ್ಸಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಆದರೆ ಡ್ರಿಪ್‍ಗಳ ಮಾಲೀಕರು ಕೋಟಿಕೋಟಿ ಹಣ ಲೂಟಿ ಹೊಡೆಯುತ್ತಿದ್ದು, ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಇನ್ನು ಗುಂಡುಸೂಜಿ ತಯಾರುಮಾಡುವವರೂ ಅದಕ್ಕೆ ಬೆಲೆ ನಿಗಧಿ ಮಾಡುತ್ತಾರೆ. ಆದರೆ ಇಂದು ಸಾಲಗಳನ್ನು ಮಾಡಿ, ಔಷಧಿಗಳನ್ನು ಹೊಡೆದು ಕಷ್ಟಪಟ್ಟು ಬೆಳೆಯುವ ಬೆಳೆಗಳಿಗೆ ರೈತರು ಬೆಲೆ ನಿಗಧಿ ಮಾಡಲು ಅಧಿಕಾರವಿಲ್ಲ.
ಆ ಬೆಳೆಗಳಿಗೆ ಬರುವ ನಾನಾ ರೋಗಗಳಿಗೆ ಖರೀದಿಸುವ ಔಷಧಿಗಳದ್ದೂ ದೊಡ್ಡ ದಂಧೆ ನಡೆಯುತ್ತಿದೆ. ಒಟ್ಟಾರೆಯಾಗಿ ತೋಟಗಾರಿಕೆ ಇಲಾಖೆಯಲ್ಲಿ ನಡೆದಿರುವ ಕೋಟ್ಯಾಂತರರೂಪಾಯಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣವನ್ನು ಸಿಬಿಐ ತನಿಖೆ ನಡೆಸಬೇಕಾಗಿ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಲಾಖೆಯ ಉಪನಿರ್ದೇಶಕರಾದ ಗಾಯಿತ್ರಿ ರವರು, ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಮಾ, ವರಮಹಾಲಕ್ಷೀ, ನಳಿನಿ. ವಿ, ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ಐತಾಂಡಹಳ್ಳಿ ಮಂಜುನಾಥ್, ರವಿ, ಸುಪ್ರೀಂ ಚಲ, ಕೇಶವ ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಸುಧಾಕರ್, ಜಗದೀಶ್, ನಾಗರಾಜ್, ತೆರನಹಳ್ಳಿ ಆಂಜಿನಪ್ಪ ಮುಂತಾದವರಿದ್ದರು.