ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ: ಕೋಲಾರ ಜಿಲ್ಲಾ ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರವನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ತಂಬಳ್ಳಿ ಮುನಿಯಪ್ಪ ಹೇಳಿದರು.
ಕುವೆಂಪು ನಗರದಲ್ಲಿರುವ ಕುರುಬರ ಸಂಘದ ಹಾಸ್ಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ 300ಕ್ಕೂ ಹೆಚ್ಚು ಪಿಯುಸಿ ಮತ್ತು ಎಸೆಸ್ಸೆಲ್ಸಿ ಪ್ರತಿಭೆಗಳಿಗೆ ಪುರಸ್ಕಾರ ಮಾಡಲಾಗಿದ್ದು ಈ ವರ್ಷ ಎಲ್ಲಾ ತಾಲೂಕುಗಳ ಸಮುದಾಯದ ತಾಲೂಕು ಅಧ್ಯಕ್ಷರು ಸಭೆಗಳನ್ನು ನಡೆಸಿ ಅರ್ಜಿಗಳನ್ನು ಕ್ರೋಡೀಕರಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ. 90 ಅಂಕಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ಸದಸ್ಯತ್ವ ಅಭಿಯಾನ ಪ್ರಾರಂಭಿಸಿ ಸದಸ್ಯರ ಷೇರು ಹಣದ ಒಂದು ಭಾಗವನ್ನು ಶಿಕ್ಷಣ ನಿಧಿ ಸ್ಥಾಪಿಸಿ ಸಮುದಾಯದ ಬಡಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಸದಸ್ಯರು ಅಧ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆಮಾಡಬಹುದು ಎಂದು ತಿಳಿಸಿದರು. ಸಮುದಾಯದ ಹಾಸ್ಟೆಲ್ ಹಾಗೂ ಕನಕ ಭವನವನ್ನು ನಿರ್ಮಾಣ ಸಮಿತಿಯನ್ನು ರಚಿಸುವುದಾಗಿ ಹೇಳಿದರು.
ನಗರಸಭೆ ಸದಸ್ಯ ಪ್ರಸಾದ್ ಬಾಬು ಮಾತನಾಡಿ, ಕನಕ ಭವನ ನಿರ್ಮಾಣ ಮಾಡಲು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನ ಮಂಜೂರಿಗೆ ಜಿಲ್ಲಾಧಿಕಾರಿಗಳ ಬಳಿಗೆ ಸಮುದಾಯದ ಮುಖಂಡರು ತೆರಳಿ ಮನವಿಯನ್ನು ಸಲ್ಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆತ್ಮಕ್ಕೆ ಶಾಂತಿ ಕೋರಿ ಸಭೆಯಲ್ಲಿ ಎರಡು ನಿಮಿಷ ಮೌನಚರಣೆ ಮಾಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಅಪ್ಪೇಗೌಡ, ಕೆ.ಎನ್.ಸರಸ್ವತಮ್ಮ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ನಡುಪಳ್ಳಿ ಕೃಷ್ಣಮೂರ್ತಿ, ಬಂಗಾರಪೇಟೆ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಶ್ರೀನಿವಾಸಪುರ ಅಧ್ಯಕ್ಷ ವೇಮಣ್ಣ, ಶಾಂತಮ್ಮ, ಸಮುದಾಯದ ಮುಖಂಡರಾದ ಹೂಹಳ್ಳಿ ಚಂದ್ರಶೇಖರ್, ವೆಂಕಟಶಿವಪ್ಪ, ಕೆ.ಎನ್. ಪ್ರಕಾಶ್, ಜೆ.ಕೆ.ಜಯರಾಂ, ಕೆಎಸ್ಸಾರ್ಟಿಸಿ ಮುನಿಯಪ್ಪ, ಜಯಕರ್ನಾಟಕ ತ್ಯಾಗರಾಜ್, ಕೋಡಿರಾಮಸಂದ್ರ ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಸಮುದಾಯದ ಮುಖಂಡರು ಹಾಜರಿದ್ದರು.