ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕಾನೂನು ಪಾಲನೆಯಿಂದ ನೆಮ್ಮದಿ ಜೀವನ – ಸಂತೋಷ್ ಗಜಾನನ ಭಟ್.
ಕೋಲಾರ: ದಿನ ನಿತ್ಯದ ಜೀವನದಲ್ಲಿ ಕಾನೂನುಗಳನ್ನು ಪಾಲಿಸುವ ಮೂಲಕ ಸುಖ ಶಾಂತಿ ನೆಮ್ಮದಿಯನ್ನು ಕಾಣಲು ಮುಂದಾಗಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಜೈಲು ವಾಸಿಗಳಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದಿಂದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಚಾರಣಾಧೀನ ಖೈದಿಗಳಿಗೂ ಹಲವಾರು ಹಕ್ಕುಗಳಿದ್ದು, ಇದನ್ನು ಸಮರ್ಥವಾಗಿ ಬಳಸಿಕೊಂಡು ಗುಣಮಟ್ಟ ಜೀವನ ನಡೆಸಬೇಕು. ತ್ವರಿತವಾಗಿ ವಿಚಾರಣೆ ನಡೆಸಿ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸಬೇಕು ಎಂಬ ಕಾನೂನನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ನ್ಯಾಯಾಂಗ ಶಕ್ತಿ ಮೀರಿ ಶ್ರಮಿಸುತ್ತಿದೆ. ಯಾವುದೇ ಒಂದು ಕ್ಷಣದ ನಿರ್ಧಾರದಿಂದ ತಪ್ಪಾಗಿ ಹೋಗಿದ್ದು, ಹೀಗಾಗಿ ಕಾನೂನನ್ನು ಬಳಸಿಕೊಂಡು ಜೈಲಿನಿಂದ ಹೊರ ಹೋಗುವ ಮೂಲಕ ಉನ್ನತ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್ ಗಂಗಾಧರ್ ಅವರು ಮಾತನಾಡಿ ಒಂದು ಅಪರಾಧಕ್ಕೆ ಒಂದೇ ಶಿಕ್ಷೆ ಎಂದು ಸಂವಿಧಾನ ಹೇಳಿದೆ ಹೀಗಾಗಿ ನ್ಯಾಯಾಲಯವು ಸಹ ಇದನ್ನೇ ಅನುಮೋದಿಸುತ್ತಿದೆ ಎಂದ ಅವರು ಬಡ ವಿಚಾರಣಾ ಬಂಧಿಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ವಕೀಲರ ಸೇವೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಕೆ.ಎನ್ ಮೋಹನ್ ಕುಮಾರ್ ಅವರು ಮಾತನಾಡಿ ಜೈಲಿಗೆ ಬಂದ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು, ಸಂಬಂಧಿಕರ ಜೊತೆ ಮಾತನಾಡುವುದು ಮತ್ತು ಮುಂದಿನ ಕೇಸಿನ ದಿನಾಂಕ ತಿಳಿದುಕೊಳ್ಳುವ ಹಕ್ಕು ಬಂಧಿಗಳಿಗೆ ಇದೆ ಎಂದು ಮಾಹಿತಿ ನೀಡಿದರು.
ವಕೀಲ ಸಂಘದ ಅಧ್ಯಕ್ಷರಾದ ಟಿ.ಆರ್. ಜಯರಾಮ್ ಅವರು ಮಾತನಾಡಿ ಬಂಧಿಗಳು ತಮ್ಮ ಈಗಿನ ಪರಿಸ್ಥಿತಿ ಕುರಿತಂತೆ ಚಿಂತೆ ಮಾಡುವುದನ್ನು ಬಿಟ್ಟು ಜೈಲಿನಿಂದ ಹೊರಗೆ ಹೋದ ನಂತರ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಸಾರ್ಥಕ ಬದುಕನ್ನು ಸಾಗಿಸಬೇಕು. ಯಾವುದೇ ಕೆಲಸ ಮಾಡುವ ಮುನ್ನ ಹತ್ತಾರು ಬಾರಿ ಚಿಂತನೆ ಮಾಡಿ ಎಲ್ಲವನ್ನು ಕಾನೂನು ವ್ಯಾಪ್ತಿಯಲ್ಲಿ ಮುಗಿಸಬೇಕು. ಸಮಸ್ಯೆಗಳು ಬಂದಾಗ ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.