ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಅವಿಭಜಿತ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪದಾಧಿಕಾರಿಗಳ ಸಭೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಅವಿಭಜಿತ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪದಾಧಿಕಾರಿಗಳ ಸಭೆ

ಕೋಲಾರ,ಜು.15: ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಅವಿಭಜಿತ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪದಾಧಿಕಾರಿಗಳ ಸಭೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಉದ್ಘಾಟಿಸಿದರು.
ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ದಲಿತ ಚಳುವಳಿ ಉಳಿದ ಎಲ್ಲಾ ಚಳುವಳಿಗಳಿಗೆ ತಾಯಿ ಇದ್ದಂತೆ. ಇದರಿಂದ ಇತರೆ ಎಲ್ಲಾ ಚಳುವಳಿಗಳು ಹುಟ್ಟಿಕೊಂಡು ತಮ್ಮ ಅಸ್ಥಿತ್ವದ ಉಳಿವಿಗಾಗಿ ಸಂಘಟನೆಗಳನ್ನು ಕಟ್ಟಿಕೊಂಡರು. ಕಾರ್ಯಕರ್ತರಿಗೆ ಅಧ್ಯಯನದ ಕೊರತೆಯಿಂದಾಗಿ ಕಾರ್ಯಕರ್ತರ ಪಡೆಯನ್ನು ಕಟ್ಟುವ ಬದಲು ತಾವು ನಾಯಕರಾಗಲು ಬಯಸಿದ್ದರಿಂದ ದಲಿತ ಚಳುವಳಿಗಳು ಗಟ್ಟಿತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಘಟನಾ ಸಂಚಾಲಕ ಹಾಸನದ ಎಸ್.ಎನ್.ಮಲ್ಲಪ್ಪ ಮಾತನಾಡಿ, ದಲಿತ ಸಂಘಟನೆಗಳಿಗೆ ಸಾಂಸ್ಕøತಿಕ ನೆಲೆಗಟ್ಟು ಇಲ್ಲದೆ ಇದ್ದರೆ ಅದು ಹೆಚ್ಚು ಕಾಲ ಜನರ ಮಧ್ಯೆ ಚಳುವಳಿಯಾಗಿ ಉಳಿಯದೆ ರಾಜಕೀಯ ಲೇಪಿತ ಚಳುವಳಿಯಾಗಿ ಸಮಾಜದಲ್ಲಿ ಉಳಿಯಬೇಕಾಗುತ್ತದೆ ಎಂದರು. 80ರ ದಶಕದ ಮಾದರಿಯಲ್ಲಿ ಸಂಘಟನೆಯನ್ನು ಕಟ್ಟಿದಾಗ ಮಾತ್ರ ದಲಿತ ಚಳುವಳಿ ಉಳಿಯಲು ಸಾಧ್ಯ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಇಂದು ದೇಶಾದ್ಯಂತ ಕೋಮುವಾದ ಶಕ್ತಿಗಳು ತಾಂಡವಾಡುತ್ತಿವೆ. ಇದರ ಮಧ್ಯೆ ವಿಘಟನೆಯಾಗಿರುವ ದಲಿತ ಸಂಘಟನೆಗಳು ಚುರುಕಾಗಿ ಶೋಷಿತ ಸಮಾಜದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕಾರ್ಯಕರ್ತರಿಗೆ ಕರೆಯುತ್ತರು.
ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಕೋಲಾರ ನಗರದ ತೇರಹಳ್ಳಿ ಬೆಟ್ಟದ ಮೇಲಿರುವ ಆದಿಮದಲ್ಲಿ ಆಗಸ್ಟ್ 23, 24, 25 ರಂದು ನಡೆಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಚಿಂತಾಮಣಿ ವಿಜಿಯನರಸಿಂಹ, ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರವಣಪ್ಪ, ಕೆ.ವಿ ವೆಂಕಟೇಶ್, ಅಮರ್, ರೋಜಾರಪಲ್ಲಿ ವೆಂಕಟರವಣಪ್ಪ, ಗನ್ ವೆಂಕಟರವಣಪ್ಪ, ಮದನಹಳ್ಳಿ ವೆಂಕಟೇಶ್, ಚವ್ವೇನಹಳ್ಳಿ ವಿಜಿ, ಮುನಿಚೌಡಪ್ಪ, ಸಂಪತಕುಮಾರ್, ಗೋವಿಂದರಾಜು, ಪುರಹಳ್ಳಿ ಜಿ.ಯಲ್ಲಪ್ಪ ಎರಡೂ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.