ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಎಲ್ಐಸಿ ಪ್ರತಿನಿಧಿಗಳು ಹೂಡಿಕೆದಾರರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು – ಹನುಮಂತ ನಾಯಕ್
ನಿವಾಸಪುರ: ಎಲ್ಐಸಿ ಪ್ರತಿನಿಧಿಗಳು ಹೂಡಿಕೆದಾರರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರು ಮೋಸದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡದಂತೆ ತಿಳಿಹೇಳಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಜಿಲ್ಲಾ ವ್ಯವಸ್ಥಾಪಕ ಹನುಮಂತ ನಾಯಕ್ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಜನರು ಅಧಿಕ ಬಡ್ಡಿ ಆಸೆಯಿಂದ ಬ್ಲೇಡ್ ಕಂಪನಿಗಳಲ್ಲಿ ಹಣ ಹೂಡಿ ಮೋಸ ಹೋಗುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಸಂಪಾದಿಸಿದ ಅಮೂಲ್ಯವಾದ ಹಣ ಮೋಸಗಾರರ ಪಾಲಾಗುತ್ತಿದೆ. ಇಂಥ ಪರಿಸ್ಥಿತಿಯಿಂದ ಪಾರಾಗಲು ಎಲ್ಐಸಿ ಒಂದು ಉತ್ತಮ ಆಯ್ಕೆ ಎಂದು ಹೇಳಿದರು.
ಪ್ರತಿನಿಧಿಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಹಾಗೂ ಅನಿರೀಕ್ಷಿತ ಘಟನೆಗಳಿಂದ ರಕ್ಷಣೆ ಪಡೆಯಲು ಎಲ್ಐಸಿಯಲ್ಲಿ ಹಣ ತೊಡಗಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕು. ಅವರ ಮನವೊಲಿಸಿ ಜೀವನ ಭದ್ರತೆ ಒದಗಿಸಬೇಕು. ಇದೊಂದು ಆರ್ಥಿಕ ವ್ಯವಹಾರ ಹಾಗೂ ಸಮಾಜ ಸೇವಾ ಕಾರ್ಯ ಎಂದು ಹೇಳಿದರು.
ಜಿಲ್ಲಾ ಎಲ್ಐಸಿ ಘಟಕದ ಉಪ ವ್ಯವಸ್ಥಾಪಕ ವಾಸುದೇವ ಗಳದಿ, ತಾಲ್ಲೂಕು ಘಟಕದ ವ್ಯವಸ್ಥಾಪಕ ಸತೀಶ್, ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ರವೀದ್ರಯ್ಯ ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್ ಮಾತನಾಡಿದರು.