ಅಮ್ಮ ಕುಂದಾಪ್ರಕನ್ನಡ ಕಥಾಪ್ರಶಸ್ತಿ ಪ್ರದಾನ :ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಅತ್ಯಗತ್ಯ
ಕೋಟ ಶ್ರೀನಿವಾಸ ಪೂಜಾರಿ
ಕುಂದಾಪ್ರ ಕನ್ನಡದ ವೈಶಿಷ್ಟ್ಯದ ಬಗ್ಗೆ ಚರ್ಚೆ, ಸಂವಾದ ನಡೆದಷ್ಟು ಅದು ಉತ್ತಮ. ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವ ಕುಂದಾಪ್ರಕನ್ನಡ ಭಾಷೆ ಸಂಸ್ಕøತಿ ಉಳಿಸಲು ಅಕಾಡೆಮಿಯೊಂದರ ಅಗತ್ಯ ನನಗೆ ಮನವರಿಕೆಯಾಗಿದೆ. ಈ ಭಾಷೆಯ ಅಧ್ಯಯನ ಹಾಗೂ ಉಳಿವಿಗೆ ಸರಕಾರದಿಂದ ಅಕಾಡೆಮಿ ಸ್ಥಾನಮಾನ ಪಡೆಯಬೇಕೆಂಬ ಪ್ರಯತ್ನ ಮುಂದುವರೆಸುತ್ತೇನೆ. ಆದರೆ ಇಂದಿನ ಶಾಸಕಾಂಗ, ಕಾರ್ಯಾಂಗದ ವ್ಯವಸ್ಥೆಯಲ್ಲಿ ಯಾವುದೇ ಪ್ರಯತ್ನ ಫಲಕಾರಿಯಾಗಬೇಕಾದಲ್ಲಿ ಸಮಯ , ಸಂದರ್ಭ ಅನುಕೂಲ ವಾಗಿರಬೇಕಾಗಿರುತ್ತದೆ. ಅರೆಭಾಷೆ, ಅಕಾಡೆಮಿ ಸ್ಥಾಪನೆಯಾಗುವಾಗ ಸದಾನಂದ ಗೌಡರೇ ಮುಖ್ಯಮಂತ್ರಿ ಯಾಗಿದ್ದರು. ಹಾಗಾಗಿ ಅವರ ಭಾಷೆಗೆ ಅವರು ಮಹತ್ವ ಕೊಟ್ಟರು. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಗೂ ಕಾಲಕೂಡಿ ಬರಬಹುದು” ಎಂದುಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರದ ಶಿವಪ್ರಸಾದ ಗ್ರ್ಯಾಂಡ್ ಸಭಾಂಗಣದಲ್ಲಿ ಕಮಲಮ್ಮ ಅನಂತ ಕೃಷ್ಣವರ್ಣ ಪ್ರತಿಷ್ಠಾನ, ಮಂಗಳೂರು, ಕುಂದಪ್ರಭ ಟ್ರಸ್ಟ್ ಕುಂದಾಪುರ ಏರ್ಪಡಿಸಿದ ಅಮ್ಮ ಕುಂದಾಪ್ರ ಕನ್ನಡ ಕಥಾ ಪ್ರಶಸ್ತಿ ಪ್ರದಾನ ಹಾಗೂ ಕುಂದಾಪ್ರ ಕನ್ನಡ ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋಟ ಶಿವರಾಮಕಾರಂತ ಪ್ರಾಧಿಕಾರ ರಚನೆಗೆ ಈ ಹಿಂದೆ ಯತ್ನಿಸಿದ್ದೆ. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಬಗ್ಗೆಯೂ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಪ್ರಾಧಿಕಾರ ರಚನೆ ಬಗ್ಗೆ ಮುಖ್ಯಮಂತ್ರಿಗಳ ಶಿಫಾರಸು ಹೋಗಿದ್ದರೂ ಸಂಬಂಧಪಟ್ಟ ಕಾರ್ಯದರ್ಶಿಯವರು ತಾಂತ್ರಿಕ ಕಾರಣನೀಡಿ ಮುಂದೂಡಿದರು. ಅಧಿವೇಶನದಲ್ಲಿ ನಡೆಯುವ ಪ್ರಸ್ತಾಪ, ನೀಡಿದ ಭರವಸೆಗಳು, ಕೇವಲ ಪ್ರಚಾರಕ್ಕಾಗಿ ಎಂಬ ಭಾವನೆ ಮೂಡುವಂತಾಗಿದೆ. ಅಧಿಕಾರಿಗಳೂ ವಿಚಾರ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ನಮ್ಮ ಪ್ರಯತ್ನ ಮುಂದುವರೆಯುತ್ತದೆ” ಎಂದು ಹೇಳಿದ ಅವರು ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ ಯೋಜಿಸಿದ ಸಂಘಟಕರು ಅಭಿನಂದನಾರ್ಹರು” ಎಂದರು. ಅಮ್ಮ ಕುಂದಾಪ್ರಕನ್ನಡ ಕಥಾ ಪ್ರಶಸ್ತಿ ಪಡೆದ ಮಂಜುನಾಥ ಹಿಲಿಯಾಣ ಅವರನ್ನು ಅವರು ಅಭಿನಂದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಮಲಮ್ಮ ಅನಂತಕೃಷ್ಣ ವರ್ಣ ಪ್ರತಿಷ್ಠಾನದ ಡಾ|ಗಾಯತ್ರಿ ನಾವಡ” ಅಮ್ಮನ ಹೆಸರಲ್ಲಿ ಪ್ರತಿಷ್ಠಾನ ರಚಿಸಿದ ಹಿನ್ನೆಲೆ ವಿವರಿಸಿದರು. ಕಾಲೇಜು ವಿದ್ಯಾಭ್ಯಾಸ ಪಡೆಯಲು ಅಮ್ಮ ನೀಡಿದ ಬೆಂಬಲ ನೆನೆದರು. ಪ್ರತಿಷ್ಠಾನದ ಯೋಜನೆಗಳನ್ನೂ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್.ಶಾಂತಾರಾಮ್ ವಹಿಸಿದ್ದರು.
ಅಮ್ಮ ಕುಂದಾಪ್ರಕನ್ನಡ ಕಥಾ ಪ್ರಶಸ್ತಿಗೆ ಆಯ್ಕೆಯಾದ ಕಥೆಗಾರ ಮಂಜುನಾಥ ಹಿಲಿಯಾಣ ಅವರಿಗೆ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನ ಶ್ರೀಮತಿ ಸ್ನೇಹಪ್ರಭ ರೈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪುರೋಹಿತರಾದ ಬಿ.ವಾದಿರಾಜ ವರ್ಣ ಅಭಿನಂದನಾ ಪತ್ರ ನೀಡಿದರು.
ಅಂಕಣಗಾರ ಕೋಣಿ ಶಿವಾನಂದ ಕಾರಂತ, ಅಭಿನಂದನ ಮಾತುಗಳನ್ನಾಡಿ ಮಂಜುನಾಥ ಹಿಲಿಯಾಣ ಅವರ ಕಥೆಯಲ್ಲಿರುವ ಮಾನವೀಯ ಸಂದೇಶವನ್ನು ಕೊಂಡಾಡಿದರು. ಕುಂದಾಪ್ರಕನ್ನಡದಲ್ಲಿ ಅವರ ನಿರೂಪಣೆಯನ್ನು ಪ್ರಶಂಸಿಸಿದರು. ಮಂಜುನಾಥ ಹಿಲಿಯಾಣ ಬರವಣಿಗೆಯಲ್ಲಿ ತನ್ನ ಮೇಲೆಪ್ರಭಾವ ಬೀರಿದ ಹಾಗೂ ಸಹಕರಿಸಿದವರನ್ನು ನೆನೆದು ಕೃತಜ್ಞತೆ ಅರ್ಪಿಸಿದರು.
ಕುಂದಪ್ರಭ ಟ್ರಸ್ಟ್‍ನ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ಗಣೇಶ್ ಪ್ರಸಾದ್ ನಾಯಕ್ ಸಂತೆಕಟ್ಟೆ ಅಭಿನಂದನಾ ಪತ್ರ ವಾಚಿಸಿದರು. ಪ್ರೊ. ಎ.ವಿ.ನಾವಡ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕರ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಪಿ.ಜಯವಂತ ಪೈ ವಂದಿಸಿದರು.