ಅಗಲಿದ ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗರಿಗೆ ಮೋಡರ್ನ್ ಮಹಾಭಾರತ ಚಿತ್ರ ತಂಡದ ಶ್ರದ್ಧಾಂಜಲಿ

ವರದಿ : ಕೆ.ಜಿ.ವೈದ್ಯ,ಕುಂದಾಪುರ


ಕುಂದಾಪುರ : ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗರ ನಿಧನಕ್ಕೆ ಕೋಟೇಶ್ವರದ ಮೋಡರ್ನ್ ಮಹಾಭಾರತ ಚಲನ ಚಿತ್ರ ತಂಡ ಅತೀವ ಸಂತಾಪ ವ್ಯಕ್ತಪಡಿಸಿದೆ. ಸಾಂಸಾರಿಕ ಕಥಾನಕ ಹೊಂದಿರುವ ಕನ್ನಡ ಚಲನ ಚಿತ್ರ ‘ಮೋಡರ್ನ್ ಮಹಾಭಾರತ’ ದಲ್ಲಿ ಸಾಮಗರು ಹರಿಕಥಾ ಕೀರ್ತನಕಾರರ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ಚೊಚ್ಚಲ ಸಿನಿಮಾ ನಟನೆಯಿಂದಾಗಿ ಅವರು ಬಹಳ ಉತ್ಸಾಹದಿಂದಲೇ ತಮ್ಮ ಪಾತ್ರ ನಿರ್ವಹಿಸಿದ್ದರು. ಅವರ ಅಭಿನಯದ ಈ ಭಾಗವನ್ನು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಆವರಣದಲ್ಲಿ ಚಿತ್ರೀಕರಿಸಲಾಗಿತ್ತು. 
ಖ್ಯಾತ ಚಿತ್ರನಟ ಮಂಡ್ಯ ರಮೇಶ್ ಉಡುಪಿಯಲ್ಲಿ ಮೋಡರ್ನ್ ಮಹಾಭಾರತ ಚಿತ್ರದ ಟೀಸರನ್ನು ಬಿಡುಗಡೆಗೊಳಿಸಿದ್ದರು. ಈ ಟೀಸರ್ ನೋಡಿ ಬಹುವಾಗಿ ಮೆಚ್ಚಿಕೊಂಡ ವಾಸುದೇವ ಸಾಮಗರು,  “ನೀವು ಇಷ್ಟು ಚೆನ್ನಾಗಿ ಸಿನಿಮಾ ಮಾಡುತ್ತೀರಿ ಎಂದು ಎಣಿಸಿರಲಿಲ್ಲ. ಏನೋ ಹುಡುಗರಿಗೆ ಉಮೇದು ಇದೆ, ಅವರ ಉತ್ಸಾಹಕ್ಕೆ ತಾನೇಕೆ ತಣ್ಣೀರು ಎರಚಲಿ ಎಂದು ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡೆ. ಟೀಸರ್ ನಲ್ಲಿ ಸಿನಿಮಾದ ಒಂದು ತುಣುಕು ನೋಡಿದಾಗಲೇ ಇಷ್ಟು ಚೆನ್ನಾಗಿರಬೇಕಾದರೆ ಪೂರ್ಣ ಸಿನಿಮಾ ಹೇಗಿದ್ದಿರಬಹುದು. ಅದನ್ನು ನೋಡುವ ಕುತೂಹಲ ನನಗೆ ತುಂಬಾ ಇದೆ”  ಎಂದು ಭಾವೋದ್ವೇಗದಿಂದ ಹೇಳಿಕೊಂಡಿದ್ದರು. ಮೋಡರ್ನ್ ಮಹಾಭಾರತ ಚಿತ್ರಕ್ಕೆ ಮೂರು ಅಂತರ್ ರಾಷ್ಟ್ರೀಯ ಅವಾರ್ಡ್ ಗಳು ಬಂದಾಗಲೂ ಈ ವಿಷಯ ತಿಳಿದು ಸಾಮಗರು ಸಂತಸಪಟ್ಟು ಹರಸಿದ್ದರು. ಆದರೆ ಕೊರೊನಾ ದೆಸೆಯಿಂದಾಗಿ ನಿಗದಿತ ವೇಳೆಗೆ ಚಿತ್ರ ಬಿಡುಗಡೆಗೆ ಸಾಧ್ಯವಾಗದೇ ಸಾಮಗರು ಸಿನಿಮಾ ವೀಕ್ಷಿಸಲು ಆಗಲೇ ಇಲ್ಲ . 
ಚಿತದ ನಿರ್ದೇಶಕ ಶ್ರೀಧರ ಉಡುಪ ಅಗಲಿದ ಹಿರಿಯ ಕಲಾವಿದರಿಗೆ ಸಮಗ್ರ ಮೋಡರ್ನ್ ಮಹಾಭಾರತ ಚಿತ್ರ ತಂಡದ ಪರವಾಗಿ ಶ್ರದ್ದಾಂಜಲಿ ಸಲ್ಲಿಸಿ, ಚಿತ್ರದಲ್ಲಿ ಬರುವ ಹರಿಕಥೆ ಕೀರ್ತನಕಾರರ ಪಾತ್ರಕ್ಕೆ ಸಾಮಗರು ಸೂಕ್ತ  ಎನಿಸಿ ಅವರನ್ನು ಅಳುಕಿನಿಂದಲೇ ಕೇಳಿಕೊಂಡಾಗ ಅವರು ಕತೆಯನ್ನು ಕೇಳಿ ಮೆಚ್ಚಿಕೊಂಡು, ಹುಡುಗರ ಉತ್ಸಾಹಕ್ಕೆ ಭಂಗ ತರಬಾರದು ಎಂಬ ಭಾವನೆಯಿಂದ ತಕ್ಷಣ ನಟಿಸಲು ಒಪ್ಪಿಕೊಂಡರು. ಸಿನಿಮಾದಲ್ಲಿ ಅವರ ನಟನೆ ಅದ್ಭುತವಾಗಿ ಮೂಡಿಬಂದಿದೆ. ಇದೀಗ ಸಿನಿಮಾಗೆ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದರೂ, ಹಿರಿಯರಿಗೆ ಪೂರ್ತಿ ಸಿನಿಮಾ ತೋರಿಸಲಾಗದ್ದಕ್ಕೆ ಅತೀವ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ಚಿತ್ರದ ಸಹನಿರ್ಮಾಪಕರಾದ ಅನಂತ ಪದ್ಮನಾಭ ಉಡುಪ ಮತ್ತು ಡಾ. ರಾಮಕೃಷ್ಣ ಉಡುಪರೂ ಹಿರಿಯ ಕಲಾವಿದ ವಾಸುದೇವ ಸಾಮಗರ ಅಗಲಿಕೆಗೆ ದುಃಖಪಟ್ಟಿದ್ದಾರೆ. ಅಗಲಿದ ಹಿರಿಯರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸಮಗ್ರ ಚಿತ್ರತಂಡ ಪ್ರಾರ್ಥಿಸಿದೆ.