ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾವು ಮಂಡಿ ವಹಿವಾಟಿಗೆ ಅವಕಾಶ -ಹೆಚ್.ನಾಗೇಶ್.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

 

 

ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾವು ಮಂಡಿ ವಹಿವಾಟಿಗೆ ಅವಕಾಶ -ಹೆಚ್.ನಾಗೇಶ್.

 

 

 

ಕೋಲಾರ ; ಕೋವಿಡ್-19 ವಿಶ್ವದಾದ್ಯಂತ ಬಾಧಿಸುತ್ತಿದ್ದು, ಈ ಸಂದರ್ಭದಲ್ಲಿ ರೈತರು ಬೆಳೆದಿರುವ ಮಾವು ಬೆಳೆಯನ್ನು ಮಾರಾಟ ಮಾಡಬೇಕಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾವು ಮಂಡಿ ವಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಕುರಿತು ಅವರು ಮಾತನಾಡಿದರು. ಕರೋನಾ ಸಂದರ್ಭದಲ್ಲಿ ಮಾವು ಮಂಡಿಗಳನ್ನು ತೆರೆಯಬೇಕೋ ಬೇಡವೋ ಎಂಬ ಗೊಂದಲವನ್ನು ಪರಿಹರಿಸಿಕೊಳ್ಳಲು ಅಧಿಕಾರಿಗಳು ಹಾಗೂ ಎ.ಪಿ.ಎಂ.ಸಿ. ಅಧ್ಯಕ್ಷರುಗಳ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನಿಸಲಾಗಿದೆ. ಹೊರ ರಾಜ್ಯದಿಂದ ಜಿಲ್ಲೆಗೆ ಮಾವನ್ನು ತಂದು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗುವುದು. ಮಾವು ವ್ಯಾಪಾರಸ್ಥರು ಹೊರ ರಾಜ್ಯದಿಂದ ಲಾರಿ ಹಾಗೂ ಕೆಲಸದವರನ್ನು ಕರೆ ತರುವಂತಿಲ್ಲ. ಸ್ಥಳೀಯ ಕೆಲಸಗಾರರು ಹಾಗೂ ರಾಜ್ಯದ ಲಾರಿಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 2 ಲಕ್ಷ 36 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತದೆ. ಇದರಲ್ಲಿ 1 ಲಕ್ಷ 30 ಸಾವಿರ ಟನ್ ಮಾವು ಪ್ರೊಸೆಸಿಂಗ್ ಘಟಕಗಳಿಗೆ ಹೋಗುತ್ತದೆ. 80 ಸಾವಿರ ಟನ್ ವ್ಯಾಪಾರ ವಹಿವಾಟಿಗೆ ಹೋದರೆ 10 ಸಾವಿರ ಟನ್ ಚಿಲ್ಲರೆ ಮಾರಾಟಕ್ಕೆ, ಉಳಿದ 10 ಸಾವಿರ ಟನ್ ಮಾಲ್‍ಗಳಲ್ಲಿ ಮಾರಾಟಕ್ಕೆ ಹೋಗುತ್ತದೆ. ಮಾವು ಮಂಡಳಿಗಳಲ್ಲಿ 6 ವಾರಗಳ ಕಾಲ ವಹಿವಾಟು ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಶ್ರೀನಿವಾಸಪುರದಲ್ಲಿ 120 ಮಾವು ಮಂಡಿಗಳು ಇವೆ. ಒಂದು ಲಾರಿಯಲ್ಲಿ 12 ಟನ್ ಮಾವು ಸಾಗಾಟವಾದರು ದಿನಕ್ಕೆ ಸರಾಸರಿ 160 ಲಾರಿಗಳಲ್ಲಿ ಲೋಡ್ ಹೋಗುತ್ತದೆ. ಇಷ್ಟೂ ಲಾರಿಗಳಿಗೆ ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಚರ್ಚಿಸಲಾಗಿದೆ. ರೈತರು ಬೆಳೆದ ಮಾವನ್ನು ಟ್ರ್ಯಾಕ್ಟರ್ ಮೂಲಕ ಮಂಡಿಗೆ ತರುವಾಗ ಒಂದೇ ಬಾರಿ ತರದಂತೆ ಸರದಿ ಪ್ರಕಾರ ತರಲು ವ್ಯವಸ್ಥೆ ಮಾಡಲಾಗುವುದು. ಈ ರೀತಿ ಮಾಡಲು ಮಾವು ಬೆಳೆದ ಪ್ರತಿ ಹಳ್ಳಿಗೆ ಶಿಕ್ಷಕರಿಗೆ ಜವಾಬ್ದಾರಿ ವಹಿಸಿ ಸರದಿ ಪ್ರಕಾರ ಟ್ರ್ಯಾಕ್ಟರ್ ಕಳುಹಿಸುವಂತೆ ವ್ಯವಸ್ಥೆ ಮಾಡಲಾಗುವುದು. ಮಂಡಿಯಲ್ಲಿನ ಕೆಲಸಗಾರರಿಗೆ ಊಟದ ವ್ಯವಸ್ಥೆಯನ್ನು ಮಂಡಿ ಮಾಲೀಕರೇ ಮಾಡಬೇಕು. ಮಾವು ವಹಿವಾಟು ಮುಗಿಯುವವರೆಗೆ ಶ್ರೀನಿವಾಸಪುರದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ 11 ರವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಮಾವು ಮಂಡಿಗಳಲ್ಲಿ ಏಕಕಾಲದಲ್ಲಿ ಜಾಸ್ತಿ ಜನ ಸೇರದಂತೆ ನೋಡಿಕೊಳ್ಳಲಾಗವುದು. ಕರೋನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಂಡಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗುವುದು. ಯಾವುದೇ ಜ್ಯೂಸ್ ಫ್ಯಾಕ್ಟರಿ ಕಂಪೆನಿಯಲ್ಲಿ ಕರೋನಾ ಕಂಡು ಬಂದಲ್ಲಿ 2 ದಿನಗಳ ಸ್ಥಗಿತಗೊಳಿಸಿ ಔಷಧಿ ಸಿಂಪಡಿಸಿ ನಂತರ ಪ್ರಾರಂಭಿಸಲಾಗುವುದು. ಪ್ರತಿಯೊಬ್ಬ ಕೆಲಸಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಿಗಧಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.