ಅ. 4 ರಂದು 14 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ದತೆ 5530 ಮಂದಿ ನೋಂದಣಿ-ಕೋವಿಡ್ ತಡೆಗೆ ಕ್ರಮ -ಜಯರಾಮರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಕೋವಿಡ್ ಆತಂಕದ ನಡುವೆಯೇ ಸಕಲ ರೀತಿಯ ಮುಂಜಾಗ್ರತೆ ವಹಿಸಿ ಅ.4 ರಂದು ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದ್ದು, ಪ್ರಾಥಮಿಕ ಶಿಕ್ಷಕರಗಲು 1917 ಹಾಗೂ ಪ್ರೌಢಶಿಕ್ಷಕರಾಗಲು 3613 ಮಂದಿ ಸೇರಿ ಒಟ್ಟು 5530 ಅಭ್ಯರ್ಥಿಗಳು ನಗರದ 14 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.
ಇಲಾಖೆಯ ಸಭಾಂಗಣದಲ್ಲಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೋವಿಡ್ ಆತಂಕದ ಹಿನ್ನಲೆಯಲ್ಲಿ ಇಲಾಖೆ ಎಲ್ಲಾ ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಎಲ್ಲಾ ಕೇಂದ್ರಗಳಿಗೂ
ಸ್ಯಾನಿಟೈಸರ್ ಬಳಕೆ
ಪರೀಕ್ಷೆ ನಡೆಯುವ ನಗರದ ಎಲ್ಲಾ 14 ಕೇಂದ್ರಗಳಲ್ಲೂ ಪರೀಕ್ಷೆಗೆ ಮುನ್ನಾ ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಮತ್ತು ಮೊದಲ ಅವಧಿ ಪರೀಕ್ಷೆ ಮುಗಿದ ನಂತರ ಮಧ್ಯಾಹ್ನದ ಅವಧಿ ಪರೀಕ್ಷೆಗೂ ಮುನ್ನಾ ಸಹಾ ಸ್ಯಾನಿಟೈಸರ್ ಸಿಂಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಥರ್ಮಲ್ ಸ್ಕ್ರೀನಿಂಗ್
ಕಡ್ಡಾಯಗೊಳಿಸಿದೆ
ಪರೀಕ್ಷೆಗೆ ಬರುವ ಎಲ್ಲಾ ಅಭ್ಯರ್ಥಿಗಳು ಮತ್ತು ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ, ಮಾಸ್ಕ್ ಕಡ್ಡಾಯ ಧರಿಸಲು ಸೂಚಿಸಿದ್ದು, ಕೇಂದ್ರಕ್ಕೆ ಬರುವ ಎಲ್ಲರಿಗೂ ಸ್ಯಾನಿಟೈಸರ್ ಕೈಗೆ ಹಾಕಿಯೇ ಒಳ ಕರೆಸಲಾಗುತ್ತದೆ ಎಂದು ವಿವರಿಸಿದರು.
ಈಗಾಗಲೇ ಎಲ್ಲಾ ಕೇಂದ್ರಗಳಿಗೂ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದ್ದು, ಕೋವಿಡ್ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಇಲಾಖೆ ಮುನ್ನಚ್ಚರಿಕೆ ವಹಿಸಿದೆ ಎಂದು ತಿಳಿಸಿದರು.
ಕೋವಿಡ್‍ಪೀಡಿತರಿಗೂ
ಆಸ್ಪತ್ರೆಯಲ್ಲೇ ಪರೀಕ್ಷೆ
ಕೋವಿಡ್ ಪೀಡಿತ ಪರೀಕ್ಷಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಮೊದಲೇ ಮಾಹಿತಿ ನೀಡಿದಲ್ಲಿ ಆ ಆಸ್ಪತ್ರೆ ಕೊಠಡಿಯಲ್ಲೇ ಕೊಠಡಿ ಮೇಲ್ವಿಚಾರಕರನ್ನು ನೇಮಿಸಿ ಅಲ್ಲೇ ಪರೀಕ್ಷೆ ನಡೆಸಲು ಕ್ರಮವಹಿಸಲಾಗಿದ್ದು, ಈವರೆಗೂ ಅಂತಹ ಯಾವುದೇ ಪ್ರಕರಣ ಗಮನಕ್ಕೆ ಬಂದಿಲ್ಲ ಎಂದರು.
ಕೋವಿಡ್ ಸಮಸ್ಯೆ,ಪ್ರಾಥಮಿಕ ಸಂಪರ್ಕ ಇರುವವರು ಪರೀಕ್ಷೆಗೆ ಬಂದರೆ ಅವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಡಿಡಿಪಿಐ ಅವರು, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯ ಸಹಕಾರ ಪಡೆದಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಹಿನ್ನಲೆ
ಹೆಚ್ಚುವರಿ ಸಿಬ್ಬಂದಿ
ಶಿಕ್ಷಕರ ಅರ್ಹತಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಸುಗಮ ಪರೀಕ್ಷೆಗೆ ಮುಖ್ಯ ಅಧೀಕ್ಷಕರು, ಅಭಿರಕ್ಷಕರು, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿದಂತೆ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ, ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದರು.
ಬೆಳಗ್ಗೆ 8 ಗಂಟೆಗೆ
ಕೇಂದ್ರಕ್ಕೆ ಪ್ರವೇಶ
ಪ್ರಾಥಮಿಕ ಶಿಕ್ಷಕರಾಗಲು ಪರೀಕ್ಷೆ ಬೆಳಗ್ಗೆ 9-30 ರಿಂದ 12 ಹಾಗೂ ಮಧ್ಯಾಹ್ನದ ಪ್ರೌಢಶಿಕ್ಷಕರಾಗಲು ಐಚ್ಚಿಕವಿಷಯದ ಪರೀಕ್ಷೆ 2 ರಿಂದ 4-30 ರವರೆಗೂ ನಡೆಯಲಿದೆ ಎಂದರು.
ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಲು ಸೂಚಿಸಲಾಗಿದೆ, ಬೆಳಗ್ಗೆ 9 ಗಂಟೆಗೆ ಬೆಲ್ ಬಾರಿಸಲಿದ್ದು, 9-30 ರವರೆಗೂ ಒಳಪ್ರವೇಶಕ್ಕೆ ಅವಕಾಶವಿದೆ ಮಧ್ಯಾಹ್ನ 1-30 ಗೆ ಬೆಲ್ ಆಗಲಿದ್ದು, 2 ಗಂಟೆವರೆಗೂ ಅಭ್ಯರ್ಥಿಗಳಿಗೆ ಒಳ ಪ್ರವೇಶಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಪರೀಕ್ಷಾ ಸಿಬ್ಬಂದಿಗೂ ಮಾಸ್ಕ್, ಗ್ಲೌಸ್ ಕಡ್ಡಾಯ, ಅಭ್ಯರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಲಾಗಿದೆ, ಅಗತ್ಯವಿದ್ದಲ್ಲಿ ಕೇಂದ್ರದಲ್ಲೇ ಬಳಸಿ ಬಿಸಾಡುವ ಲೋಟಗಳಲ್ಲಿ ನೀರು ಕೊಡಲು ವ್ಯವಸ್ಥೆ ಮಾಡಲಾಗಿದೆ.
144ನೇ ಸೆಕ್ಷನ್
ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದು, ಭದ್ರತೆಗೆ ಪ್ರತಿಯೊಂದು ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಬಿಇಒಗಳಾದಕೆ.ಎಸ್.ನಾಗರಾಜಗೌಡ, ಕೆಂಪಯ್ಯ, ವಿ.ಉಮಾದೇವಿ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯಿತ್ರಿ,ಕೃಷ್ಣಪ್ಪ, ವೆಂಕಟೇಶಪ್ಪ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಮಾರ್ಗಾಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.