ಕೋಲಾರ ಫೆಬ್ರವರಿ 6 : ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ರೂ. 10,500 ನೀಡಲು ಮತ್ತು 60 ವರ್ಷ ಮೇಲ್ಪಟ್ಟ 6500 ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ಇಡುಗಂಟು ಕಾರ್ಯಕ್ರಮ ರೂಪಿಸಲು ಪ್ರತಿಯೊಬ್ಬರಿಗೆ 2 ಲಕ್ಷ ರೂ. ಗಳನ್ನು ನೀಡುವಂತೆ ಹಾಗೂ ಮಾಹೆಯಾನ ಸರಿಯಾದ ಸಮಯಕ್ಕೆ 10500 ವೇತನ ನೀಡುವಂತೆ ಒತ್ತಾಯಿಸಿ ಪ್ರಜಾಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜಿಲ್ಲಾ ಪಂಚಾಯಿತಿ ಚಲೋ ಅನ್ನು ಕೋಲಾರ ನಗರದ ನಚಿಕೇತ ನಿಲಯದಿಂದ ಜಿಲ್ಲಾ ಪಂಚಾಯಿತಿವರೆಗೂ ಕಾಲ್ನಡಿಗೆಯಲ್ಲಿ ಹೊರಟು ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ 18 ವರ್ಷಗಳ ಹಿಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಅನುಕೂಲಕ್ಕೋಸ್ಕರ ಅಕ್ಷರ ದಾಸೋಹ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೌಕರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯಾಯ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೌಕರರನ್ನು ನೇಮಕ ಮಾಡಿಕೊಂಡು ಅಲ್ಪ ಸಂಬಳವನ್ನು ನೀಡುತ್ತಾ ಅಕ್ಷರ ದಾಸೋಹ ನೌಕರರ ಕೈಯಲ್ಲಿ ಇಷ್ಟು ವರ್ಷಗಳ ಕಾಲ ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಸಿಕೊಳ್ಳುತ್ತಿದ್ದಾರೆ.
ದಿನನಿತ್ಯದ ದಿನಸಿ ಪದಾರ್ಥಗಳು, ಗ್ಯಾಸ್ ಬೆಲೆ ಇತ್ಯಾದಿ ಬೆಲೆ ಏರಿಕೆಯ ಮಧ್ಯಯೂ ಅಡುಗೆ ನೌಕರರಿಗೆ ಯಾವುದೇ ರೀತಿಯ ಸಹಾಯಧನವನ್ನು ಹೆಚ್ಚು ಮಾಡದೆ ಇರುವುದು ಸಮಿತಿಯು ಬಲವಾಗಿ ಖಂಡಿಸುತ್ತಾ, ಸಂಬಳವನ್ನು ಹೆಚ್ಚು ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಕ್ಷರ ದಾಸೋಹ ನೌಕರರ ಸೇವೆಗೆ ತಕ್ಕಂತೆ ಸಂಬಳ ನೀಡದೆ ಅಂದಿನಿಂದ ಬಂದ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡುತ್ತಾ ಬಂದಿವೆ. ಆದ್ದರಿಂದ ತಮ್ಮ ಸರ್ಕಾರ ಈಗಾಗಲೇ ರಾಜ್ಯದ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಂಬಳ ಮತ್ತು ಗೌರವಧನ ಹೆಚ್ಚಿಸಿರುವುದು ಸಂತೋಷದ ವಿಷಯ. ಆದರೆ ರಾಜ್ಯದ ಅಕ್ಷರ ದಾಸೋಹ ನೌಕರಿಗೆ 1000 ಹೆಚ್ಚುವರಿ ಮಾಡಿದ್ದನ್ನು ಬಿಟ್ಟರೆ ಮತ್ತೆ ಯಾವುದೇ ಅನುಕೂಲ ಮಾಡಿಲ್ಲ. ಆದ್ದರಿಂದ ಅವರ ಸೇವೆಗೆ ತಕ್ಕ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ 60 ವರ್ಷ ಮೇಲ್ಪಟ್ಟ 6500 ಜನ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕರರನ್ನು ಹಾಗೂ ಇನ್ನಿತರ ಕಾರಣಗಳಿಂದ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದು, ಅವರಿಗೆ ಯಾವುದೇ ರೀತಿಯ ಭದ್ರತೆಯನ್ನು ನೀಡದೆ ಬರಿ ಗೈಯಲ್ಲಿ ಸೇವೆಯಿಂದ ತೆಗೆಯುವುದು ನ್ಯಾಯವಲ್ಲ. ಇಷ್ಟು ದಿನ ಸರ್ಕಾರದ ಯೋಜನೆಯಾದ ಬಿಸಿಯೂಟ ಕ್ಷೀರ ಭಾಗ್ಯ ಯೋಜನೆಯನ್ನು ಸರ್ಕಾರ ರಾಜ್ಯಾದ್ಯಂತ ಜಾರಿಗೆ ತಂದಿದ್ದು, ಅದನ್ನು ಯಶಸ್ವಿಗೊಳಿಸಿದ್ದು ಈ ಬಿಸಿಯೂಟ ಮಹಿಳೆಯರು. ಹಾಗಾಗಿ ಅವರು ಮಾಸಿಕ ರೂ.200 ರಿಂದ ಇಲ್ಲಿಯವರಿಗೂ ದುಡಿದ ನೌಕರರನ್ನು ಕೆಸಲದಿಂದ ತೆಗೆಯುವಾಗ ಅವರ ಮುಂದಿನ ಜೀವನೋಪಾಯಕ್ಕಾಗಿ ಒಂದು ಇಡಿಗಂಟು ಕಾರ್ಯಕ್ರಮ ರೂಪಿಸಿ ಪ್ರತಿಯೊಬ್ಬರಿಗೂ 2 ಲಕ್ಷ ನೀಡಿದಲ್ಲಿ ಅವರ ಜೀವನಕ್ಕೆ ಅನುಕೂಲವಾಗುತ್ತದೆ.ಕರೋನಾ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜನರಿಗೂ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಅಡುಗೆ ನೌಕರರನ್ನು ಮಾತ್ರ ಕಡೆಗಣಿಸಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.
ನೌಕರರ ಬೇಡಿಕೆಗಳಾದ ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು ಸಂಬಳವನ್ನು ಕಡ್ಡಾಯವಾಗಿ ನೀಡಬೇಕು. 60 ವರ್ಷ ಮೇಲ್ಪಟ್ಟ 6500 ಮಂದಿ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯ ಇನ್ನಿತರ ಕಾರಣಗಳಿಂದ ಸೇವೆಯಿಂದ ತೆಗೆಯುತ್ತಿರುವ ನೌಕರರಿಗೆ ಇಡಿಗಂಟು ಕಾರ್ಯಕ್ರಮ ಮೂಲಕ ಪ್ರತಿಯೊಬ್ಬರಿಗೂ 2 ಲಕ್ಷ ರೂಗಳನ್ನು ನೀಡಬೇಕು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಏಕರೂಪ ಶಿಕ್ಷಣ ಕಾಯ್ದೆಯನ್ನು ಜಾರಿ ಮಾಡಬೇಕು. ಅಂದರೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯೂ.ಕೆ.ಜಿ.ಯಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಮಾದ್ಯಮವನ್ನು ಪ್ರಾರಂಭಿಸಬೇಕು. ರಾಜ್ಯದ ಅಕ್ಷರ ದಾಸೋಹ ನೌಕರರನ್ನು ಖಾಯಂಗೊಳಿಸಬೇಕು.
ರಾಜ್ಯದ ಎಲ್ಲಾ ಅಕ್ಷರ ದಾಸೋಹ (ಬಿಸಿಯೂಟ) ನೌಕರರಿಗೆ ತಾರತಮ್ಯವಿಲ್ಲದೆ ಮಾಹೆಯಾನ ಪ್ರತಿಯೊಬ್ಬರಿಗೂ ಕನಿಷ್ಠ ವೇತನ 10500 ರೂಗಳ ಸಂಬಳ ನೀಡಬೇಕು. ಅಡುಗೆ ನೌಕರರು ಅಡುಗೆ ತಯಾರಿಸುವಾಗ ಆಕಸ್ಮಿಕವಾಗಿ ಏನಾದರೂ ತೊಂದರೆಯಾದರೆ ಅದರ ಚಿಕಿತ್ಸಾ ವೆಚ್ವವನ್ನು ಸರ್ಕಾರವೇ ಭರಿಸಬೇಕು. ಹಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕ ವರ್ಗದವರಿಂದ ಕಿರುಕುಳ ನೀಡುತ್ತಾ ಕೆಲಸ ತೆಗೆಸಲು ಮುಂದಾಗಿದ್ದು ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಲ್ಲಾ ಅಡುಗೆ ತಯಾರಿಸುವವರಿಗೆ ಒಂದೇ ಸಮವಸ್ತ್ರ ನೀಡಬೇಕು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಯಾವುದೇ ಕಾರಣಕ್ಕೂ ಯಾರೊಬ್ಬ ಅಡುಗೆ ಸಹಾಯಕರನ್ನು ಕೆಲಸದಿಂದ ತೆಗೆಯಬಾರದು.
ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರು ಕಡ್ಡಾಯವಾಗಿ ಊಟ ಮಾಡಬೇಕು ಎಂಬ ಕಾನೂನು ಇದ್ದರೂ ಬಹಳಷ್ಟು ಮಂದಿ ಶಿಕ್ಷಕರು ಪಾಲಿಸುತ್ತಿಲ್ಲ. ಅಂತಹವರನ್ನು ಸೇವೆಯಿಂದ ವಜಾಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಯಲ್ಲಿ ಪ್ರಥಮ ಆದ್ಯತೆಯನ್ನು ನೀಡಬೇಕು. ಮಧ್ಯಾಹ್ನ ಬಿಸಿಯೂಟ ಯೋಜನೆ ಸಂಬಂಧಿಸಿದ ಸಭೆಗಳಿಗೆ ನಮ್ಮ ಸಂಘಟನೆಗೂ ಆಹ್ವಾನ ನೀಡಲು ಕೋರುತ್ತೇವೆ. ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡಿಸುವ ಕಾನೂನನ್ನು ರೂಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ ಅಕ್ಷರ ದಾಸೋಹ ನೌಕರರ ಸಮಸ್ಯೆಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಶಾಲೆಗಳಲ್ಲಿ ನೌಕರರಿಗೆ ಆಗುತ್ತಿರುವ ತೊಂದರೆಯನ್ನು ಶೀಘ್ರವಾಗಿ ಬಗೆಹರಿಸಲು ಸಂಬಂಧಪಟ್ಟ ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕರುಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಮುಖಂಡರಾದ ಕೋಡಿಹಳ್ಳಿ ಜ್ಯೋತಿ, ವನಿತ, ಜಯಂತಿ, ಕೋಲಾರ ಮಮತ, ಮುಳಬಾಗಿಲು ಅಮ್ಮಯ್ಯಮ್ಮ, ಎಮ್ಮೆನತ್ತ ಶೋಭ, ಪ್ರಮೀಳಮ್ಮ, ವಕ್ಕಲೇರಿ ನಾಗವೇಣಮ್ಮ, ಆಶಾ, ಸುಗಟೂರು ಶೋಭಮ್ಮ, ರಾಧಮ್ಮ, ಮುನಿರತ್ನ, ಲಲಿತಮ್ಮ, ಮಂಜುಳ, ಲಕ್ಷ್ಮಮ್ಮ, ಕಾಂತಮ್ಮ, ರತ್ನಮ್ಮ, ಅಮರಾವತಿ, ಲಕ್ಷ್ಮಿ, ಕವಿತ, ರೈತ ಸಂಘದ ಮುಖಂಡರಾದ ಕಲ್ವಮಂಜಲಿ ರಾಮುಶಿವಣ್ಣ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮೂರ್ತಿ, ಚಂದ್ರಪ್ಪ, ಎಲ್.ಎನ್.ಬಾಬು, ಜಗನ್ನಾಥರೆಡ್ಡಿ ಇನ್ನು ಮುಂತಾದವರು ಭಾಗವಹಿಸಿದ್ದರು.