

ಕೋಲಾರ : ಮೇಕ್ ಇನ್ ಇಂಡಿಯಾ , ಡಿಜಿಟಲ್ ಇಂಡಿಯಾ , ಸ್ಟಾರ್ಟ್‌ಅಪ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಂಡು ಯುವಜನತೆ ಶ್ರೇಷ್ಠ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಗೌರವಾನ್ವಿತ ರಾಜ್ಯಪಾಲರು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹೋಟ್ ಅವರು ತಿಳಿಸಿದರು .
ಇಂದು ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2 ನೇ ವಾರ್ಷಿಕ ಘಟಿಕೋತ್ಸವ ಸಮಾಂರಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಆಚರಿಸುತ್ತಿದೆ . ಸ್ವಾತಂತ್ರ್ಯ ಚಳುವಳಿಯ ಇತಿಹಾಸದಂತೆ , 75 ವರ್ಷಗಳ ಪ್ರಯಾಣವು ಭಾರತೀಯರ ಕಠಿಣ ಪರಿಶ್ರಮ , ನಾವೀನ್ಯತೆ , ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ .
ಇಂದು ಭಾರತದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ ಎಂದು ಹೇಳಿದರು . ಮಕ್ಕಳು ಮತ್ತು ಯುವಕರ ಭವಿಷ್ಯಕ್ಕೆ ಸರಿಯಾದ ಮಾರ್ಗವನ್ನು ತೋರಿಸಲು ಮತ್ತು ದೇಶದಲ್ಲಿ ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸಲು ಅಂತರ್ಗತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕು .
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ಮಾನವೀಯ ಮೌಲ್ಯಗಳು , ಪರಿಸರ ಮತ್ತು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು .
ಯುವಕರು ಈ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಭಾಗವಾಗಿದ್ದೀರಿ , ಡಿಜಿಟಲ್ ಇಂಡಿಯಾ , ಸ್ಟಾರ್ಟ್‌ಅಪ್ ಸೇರಿದಂತೆ ಅನೇಕ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು .
ಅಲ್ಲದೇ ಉದ್ಯೋಗ ಅರಸುವ ಬದಲ ಉದ್ಯೋಗ ನೀಡುವಂತವರಾಗಬೇಕು . ಈ ಮೂಲಕ ಶ್ರೇಷ್ಠ ಭಾರತ , ನವ ಭಾರತ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಬಹುದು ಎಂದು ತಿಳಿಸಿದರು .
ಚಲನಚಿತ್ರ ಹಿರಿಯ ನಟ ಅನಂತನಾಗ್ ಅವರ ಅನುಪಸ್ಥಿತಿಯಲ್ಲಿ ಹಾಗೂ ಸಂಗೀತ ಕ್ಷೇತ್ರದ ಬಲ್ಲೇಶ್ ಭಜಂತ್ರಿ ಮತ್ತು ಐಟಿ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಶರದ್ ಶರ್ಮಾ ಅವರುಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದರು .
ಗೌರವ ಡಾಕ್ಟರೇಟ್ ಸ್ವೀಕರಿಸಿದ ಮಹನೀಯರು ಮಕ್ಕಳಿಗೆ ಸ್ಪೂರ್ತಿಯಾಗಿರುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು .
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ | ಸಿ.ಎನ್.ಮಂಜುನಾಥ್ ಅವರು ಮಾತನಾಡಿ , ಒಬ್ಬ ಶ್ರೇಷ್ಠ ತಂದೆ ತಾಯಿ ( ಪೋಷಕರು ) ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ , ದಯವಿಟ್ಟು ನನ್ನ ಮಗನಿಗೆ ಮಗಳಿಗೆ ಅಂಕಗಳ ಹುಚ್ಚು ಹಿಡಿಸಬೇಡಿ . ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿ ನೀನು ಓದಲಿಕ್ಕೆ ಬಂದಿದ್ದೀಯ ಎಂದು ದಯವಿಟ್ಟು ಹೇಳಿಕೊಡಬೇಡಿ .
ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖಷಿಯಿಂದ , ಹೆಮ್ಮೆಯಿಂದ , ನಿಷ್ಠೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ . ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ , ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ . ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ .
ವಿದ್ಯಾರ್ಥಿಗಳಿಗೆ ಬದುಕುಕಲಿಸಿ , ಕಷ್ಟಗಳಲ್ಲಿ ಓಡಿಹೋಗುವ , ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಯಿಂದ ಇರುವುದನ್ನು ಹೇಳಿಕೊಡಿ , ನೋವಿನಲ್ಲೂ ನಗುವುದನ್ನು ಕಲಿಸಿ . ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ ಎಂದು ತಿಳಿಸಿದರು .
ಸಾಧ್ಯವಾದರೆ ವಿದ್ಯಾರ್ಥಿಗಳಿಗೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ , ಸುರಿಯುವ ಮಳೆಯಲ್ಲಿ ನೆನೆಯುವ , ಚಿಟ್ಟೆಗಳ ಚಂದವನ್ನು ಆನಂದಿಸುವ , ಹಾರುವ ಪಕ್ಷಿಗಳನ್ನು ಎಣಿಸುವ , ಸಾಲಾಗಿ ನಡೆದುಕೊಂಡು ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ , ಬೀಜಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ . ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ , ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ , ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ , ಅನ್ಯಾಯ ಮಾಡಿ ಗಳಿಸುವುದಕ್ಕಿಂತ , ಒಬ್ಬರಿಗೆ ನೋವು ಮಾಡಿ ಪಡೆಯುವುದಕ್ಕಿಂತ ಪ್ರಾಮಾಣಿಕತೆಯಿಂದ ಸಾಧಿಸಲು ತಿಳಿಸಿ .
ಜೀವನ ತುಂಬಾ ಸುಂದರವಾಗಿದೆ ಎಂಬುದನ್ನು ಹೇಳಿ ಕೊಡಿ , ಪ್ರತಿ ಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ಅವನು ತಿಳಿಯಲಿ , ಹೆಣ್ಣನ್ನು ಗೌರವಿಸುವ ದೀನದುರ್ಬಲರನ್ನು , ವಯೋವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿ , ಕಷ್ಟದಲ್ಲಿ ನೋವಿನಲ್ಲಿರುವವರ ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ , ಕಡಿಮೆ ಅಂಕಗಳು ಬಂದರು ಧೃತಿ ಗೆಡದೆ ಬದುಕಿನಲ್ಲಿ ಖುಷಿಯಾಗಿ ದುಡಿದುಜೀವಿಸುವುದನ್ನು ಕಲಿಸಿ .
ನಾನು ವಿದ್ಯಾರ್ಥಿಗಳಿಗೆ ಒಬ್ಬ ಡಾಕ್ಟರ್ , ಒಳ್ಳೆಯ ಬಗ್ಗೆ , ಉನ್ನತ ಅಧಿಕಾರಿಗಿಂತ ಮನುಷ್ಯರಾಗಿ ಬಾಳುವುದನ್ನು ಕಾಣಬಯಸುತ್ತೇನೆ . ವಿದ್ಯಾರ್ಥಿಗಳಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ ಎಂದು ತಿಳಿಸಿದರು .
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ನಿರಂಜನ ಅವರು ಮಾತನಾಡಿ , ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು 2017 ರಲ್ಲಿ ಸ್ಥಾಪನೆಯಾಗಿರುತ್ತೆ , ಈ ವಿಶ್ವವಿದ್ಯಾಲಯದ ಆಡಳಿತ ಕಛೇರಿಯು ಟಮಕ ಬಳಿ ಇದೆ .
ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಮ ಕೋಟೆಯ ಅಮರಾವತಿ ಊರಿನ ಬಳಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ .
ಈ ವಿಶ್ವವಿದ್ಯಾಲಯಕ್ಕೆ 284 ಸರ್ಕಾರಿ ಪ್ರಥಮ ದರ್ಜೆ ಕಾಲೇಜು , 200 ಅಟಾನಮಸ್ ಕಾಲೇಜುಗಳು ಒಳಪಡುತ್ತಿದೆ . ವಿಶ್ವವಿದ್ಯಾಲಯವು ನ್ಯಾಕ್ , ಯು.ಜಿ.ಸಿ.ಯಿಂದ ಮಾನ್ಯತೆ ಪಡೆದಿದೆ .
ಪದವಿಯಲ್ಲಿ 18,203 ವಿದ್ಯಾರ್ಥಿಗಳು , ಸ್ನಾತಕೋತ್ತರ ಪದವಿಯಲ್ಲಿ 7482 ವಿದ್ಯಾರ್ಥಿಗಳು , ಒಟ್ಟು 92,264 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರು ( ಆಡಳಿತ ) ಡಾ || ವೆಂಕಟೇಶ್ ಮೂರ್ತಿ , ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರು ( ಮೌಲ್ಯಮಾಪನ ) ಪ್ರೊಡೊಮಿನಿಕ್.ಡಿ , ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಡೀನ್ ಡಾ || ಡಿ.ಕುಮುದಾ , ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿತ್ತಾಧಿಕಾರಿಗಳಾದ ವಸಂತ್ ಕುಮಾರ್ , ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ , ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು , ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .




