“ಯುವ ಜನರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಶಿಕ್ಷಣದೊಂದಿಗೆ ಪ್ರಕೃತಿಯ ನಡುವೆ ಸಾಹಸ ಮಾಡುವ ಶ್ರಮದಿಂದ ಆತ್ಮವಿಶ್ವಾಸವೂ ಬೆಳೆಯುತ್ತದೆ, ಆರೋಗ್ಯವೂ ವೃದ್ಧಿಯಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಗೈಡ್, ಎನ್.ಸಿ.ಸಿ., ಎನ್.ಎಸ್.ಎಸ್. ವಿಭಾಗಗಳಲ್ಲಿ ಸೇರಿಕೊಂಡ ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಸವಾಲುಗಳನ್ನು ಎದುರಿಸುವ ಧೈರ್ಯ ಹೆಚ್ಚಿರುತ್ತದೆ. ತರಬೇತಿ ಪಡೆದರೆ ಇತರರೂ ಕ್ರಿಯಾಶೀಲರಾಗಬಹುದು. ಭಾರತ ದೇಶದ ಪ್ರಕೃತಿ ಜಲ ಕ್ರೀಡೆ, ಪರ್ವತಾರೋಹಣ ಸಾಹಸ ಕ್ರೀಡೆಗೆ ಅತ್ಯುತ್ತಮವಾಗಿದೆ. ನಮ್ಮ ಕುಂದಾಪುರ ತಾಲೂಕಿನಲ್ಲೂ ಅಪೂರ್ವ ಸಂಪನ್ಮೂಲವಿದೆ. ಈಗಾಗಲೇ ಹಲವು ಯುವಕರು ನಡೆಸುವ ಪ್ರಯತ್ನಗಳಿಗೆ ಪ್ರೋತ್ಸಾಹ ದೊರಕಬೇಕು” ಎಂದು ಸಾಹಸ ಕ್ರೀಡಾ ತಜ್ಞ ತರಬೇತುದಾರ ಹರಿಪ್ರಸಾದ ಶೆಟ್ಟಿ ಹೇಳಿದರು.
ಕುಂದಾಪುರದ ಹೋಟೆಲ್ ಶಿವಪ್ರಸಾದ್ ಗ್ರ್ಯಾಂಡ್ನಲ್ಲಿ ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಿ ಕುಂದಾಪುರ ಸನ್ರೈಸ್ ಜಂಟಿಯಾಗಿ ಏರ್ಪಡಿಸಿದ “ಎಡ್ವೆಂಚರ್ ಸ್ಪೋಟ್ರ್ಸ್ ಇನ್ ಇಂಡಿಯಾ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಮಾಲಯದ ಪರ್ವತಾರೋಹಣ ಸಾಹಸ, ನದಿ, ಸಮುದ್ರದಲ್ಲಿ ವೈವಿಧ್ಯಮಯ ಕ್ರೀಡೆಗಳ ಬಗ್ಗೆ ಅವರು ಅನುಭವ ವಿವರಿಸಿದರು.
ಕುಂದಾಪುರದ “ಔಟ್ ಟು ನೇಚರ್” ಸ್ಥಾಪಕರಾದ ರಾಕೇಶ ಸೋನ್ಸ್ ಕುಂದಾಪುರದ ಪಂಚಗಂಗಾವಳಿಯಿಂದ ಸಮುದ್ರದ ನೀರಿನಲ್ಲಿ ಪ್ರವಾಸ ಕ್ರೀಡೆಯ ಅನುಭವ ಪಡೆಯಲು ಇರುವ ಅವಕಾಶ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ವಹಿಸಿದ್ದರು. ರೋಟರಿ ಕುಂದಾಪುರ ಸನ್ರೈಸ್ ಅಧ್ಯಕ್ಷ ನಾಗರಾಜ ನಾಯ್ಕ ಅಭಿನಂದನಾ ಮಾತುಗಳನ್ನಾಡಿದರು.
ಸಾಧಕ ಹರಿಪ್ರಸಾದ್ ಶೆಟ್ಟಿಯವರನ್ನು ಮಾಜಿ ಅಧ್ಯಕ್ಷರಾದ ಕೆ. ಸೀತಾರಾಮ ನಕ್ಕತ್ತಾಯ, ಯು.ಎಸ್.ಶೆಣೈ, ಡಾ| ಉತ್ತಮ್ ಕುಮಾರ್ ಶೆಟ್ಟಿ, ಅಬ್ಬು ಸಾಹೇಬ್ ಸನ್ಮಾನಿಸಿ ಗೌರವಿಸಿದರು. ಸಚಿನ್ ನಕ್ಕತ್ತಾಯ ಅಭಿನಂದನಾ ಪತ್ರ ವಾಚಿಸಿದರು.
ರೋಟರಿ ದಕ್ಷಿಣದ ಕಾರ್ಯದರ್ಶಿ ರೋ. ರಮಾನಂದ ಕಾರಂತ ಅತಿಥಿಗಳನ್ನು ಪರಿಚಯಿಸಿದರು.
ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಕಾರ್ಯಕ್ರಮದ ಮಹತ್ವ ವಿವರಿಸಿದರು.
ರೋಟರಿ ಕುಂದಾಪುರ ಸನ್ರೈಸ್ ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ವಂದಿಸಿದರು.