

ಶ್ರೀನಿವಾಸಪುರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಘಟಕದ ನಿರ್ದೇಶಕ ಮುರಳೀಧರ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈವರೆಗೆ 1630 ಮದ್ಯವರ್ಜನ ಶಿಬಿರ ನಡೆಸಲಾಗಿದೆ. ಸಾವಿರಾರು ಮದ್ಯ ವ್ಯಸನಿಗಳು ಮದ್ಯವರ್ಜನ ಮಾಡಿ ಸಂತೋಷದಿಂದ ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಸಮಾಜ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಮಟ್ಟ ಸುಧಾರಣೆಗೆ ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಲಾಗಿದೆ. ದೇವಾಲಯಗಳ ನಿರ್ಮಾಣ ಹಾಗೂ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕೆರೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎಂ.ಲಕ್ಷ್ಮಣಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಯೋಜನಾಧಿಕಾರಿ ಗಣೇಶ್ ಆಚಾರ್ಯ, ಎಸ್.ಸುರೇಶ್ ಗೌಡ ಇದ್ದರು.