

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕುಪ್ಪಹಳ್ಳಿ ಗ್ರಾಮದ 14 ವರ್ಷದ ಯುವ ಈಜುಗಾರ್ತಿ ಡಿಂಪಲ್ ಸೋನಾಕ್ಷಿ ಎಂ ಗೌಡ ಅವರು ಗುಜರಾತ್ನ ಅದ್ರಿ ಬೀಚಿನಿಂದ ವೀರವಾಲ್ ಜೆಟ್ಟಿಯವರೆಗೆ ನಡೆದ 30 ಕಿಮೀ ಸಮುದ್ರ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಶ್ರೇಯಸ್ಸು ಸಾಧಿಸಿದ್ದಾರೆ.
ಡಿಂಪಲ್ ಅವರು 2023ರಲ್ಲಿ ರಾಷ್ಟ್ರಮಟ್ಟದ 10 ಕಿಮೀ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಹಾಂಕಾಂಗ್ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ವಿಜಯದುರ್ಗ, ಮಾಲ್ವನ್ ಮತ್ತು ಪೋರಬಂದರದ ಈಜು ಸ್ಪರ್ಧೆಗಳಲ್ಲೂ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಒಲಿಂಪಿಕ್ ಕನಸು:
ಡಿಂಪಲ್ ಸೋನಾಕ್ಷಿ, ವಿಶ್ವ ಚಾಂಪಿಯನ್ಷಿಪ್ ಮತ್ತು ಒಲಿಂಪಿಕ್ಸ್ನಲ್ಲಿ ಭಾರತಕ್ಕಾಗಿ ಪದಕ ಗೆಲ್ಲುವ ಗುರಿಯೊಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನಿಹಾರ್ ಅಮೀನ್ ಅವರ ಡಾಲ್ಫಿನ್ ಅಕಾಡೆಮಿಯಲ್ಲಿ ದಿನನಿತ್ಯ ಆರು ಗಂಟೆಗಳ ಈಜು ಅಭ್ಯಾಸ ಮಾಡುತ್ತಿದ್ದಾರೆ.
ಡಿಂಪಲ್ ಅವರ ಸಾಧನೆಗೆ ಅಭಿನಂದನೆಗಳು ಅವರ ಪರಿಶ್ರಮ ಮತ್ತು ಪೋಷಕರ ಬೆಂಬಲದಿಂದ ನಮ್ಮ ಜಿಲ್ಲೆ ಒಲಿಂಪಿಕ್ ಪದಕ ವಿಜೇತರ ಪಟ್ಟಿಯಲ್ಲಿ ಸೇರುವಂತೆ ಹಾರೈಸೋಣ .
