ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಹೋಬಳಿ ಮಟ್ಟದಲ್ಲಿ ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಇದರಿಂದ ಕೈಗೆ ಎಟುಕುವ ಅಂತರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗುತ್ತವೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಶುಕ್ರವಾರ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕಾಭಿವೃದ್ಧಿಗೆ ಹೈನುಕಾರಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.
ನಂದಿನಿ ಹಾಲು ಉತ್ಪನ್ನಗಳು ರುಚಿ ಮತ್ತು ಶುಚಿಗೆ ಹೆಸರಾಗಿರುವುದರಿಂದ, ಜನ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದು ರೈತರಿಗೆ ವರವಾಗಿ ಪರಿಣಮಿಸುತ್ತದೆ. ಅವರು ಹಾಲು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ, ಮುಖಂಡರಾದ ನಾರಾಯಣಸ್ವಾಮಿ, ಕೆ.ಎಸ್.ಹರೀಶ್, ವಿ.ರಾಮಚಂದ್ರ, ರಾಮಾನುಜಸ್ವಾಮಿ, ರಮೇಶ್ ಬಾಬು, ಸಿ.ಅಶ್ವಥ್, ಅಮೀರ್ ಖಾನ್, ಬೈರೇಗೌಡ, ರಾಜಾರೆಡ್ಡಿ, ಪಿ.ವಿ.ಶ್ರೀನಿವಾಸ್, ನಂಜುಂಡಗೌಡ, ರಾಮೇಗೌಡ ಇದ್ದರು.