

ಶ್ರೀನಿವಾಸಪುರ: ನಗರ ಪ್ರದೇಶದಲ್ಲಿ ಯೋಗ ಶಿಕ್ಷಣ ಆದ್ಯತೆ ವಿಷಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಯೋಗಾಭ್ಯಾಸದಿಂದ ದೊರೆಯುವ ಪ್ರಯೋಜನ ಕುರಿತು ಪ್ರಚಾರ ಮಾಡಬೇಕಾದ ಅಗತ್ಯವಿದೆ ಎಂದು ತಾಲ್ಲೂಕು ಎಲ್‍ಐಸಿ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ಎಲ್‍ಐಸಿ ಸಿಬ್ಬಂದಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಯೋಗ ಪ್ರಚಾರ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಇಂದು ವಿಶ್ವ ಅಡ್ಡ ಪರಿಣಾಮ ಇಲ್ಲದ ಆರೋಗ್ಯ ರಕ್ಷಣೆಗಾಗಿ ಭಾರತದ ಕಡೆ ನೋಡುತ್ತಿದೆ. ಯೋಗ ಪರ್ಯಾಯ ಆರೋಗ್ಯ ರಕ್ಷಣಾ ಮಾರ್ಗವಾಗಿ ಸ್ವೀಕರಿಸಲ್ಪಡುತ್ತಿದೆ. ಭಾರತದ ಕೊಡುಗೆಯಾದ ಯೋಗ ಈಗ ಗಡಿದಾಟಿ ಹೋಗಿದೆ. ವಿಶ್ವದಾದ್ಯಂತ ಜನರು ಯೋಗ ಕಲಿಯಲು ಹಾತೋರೆಯುತ್ತಿದ್ದಾರೆ ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್ ಇದ್ದರು.