

ಕೋಲಾರ:- ಮಾನಸಿಕ, ದೈಹಿಕ ಆರೋಗ್ಯ ಉತ್ತಮಗೊಳ್ಳುವ ಮೂಲಕ ಸದಾ ಕಲಿಕೆಯಲ್ಲಿ ಕ್ರಿಯಾಶೀಲತೆಗೆ ಯೋಗ ಸಹಕಾರಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ತಿಳಿಸಿದರು.
ಶಾಲೆಯ ಆವರಣದಲ್ಲಿ ವಿಶ್ವಯೋಗದಿನದ ಅಂಗವಾಗಿ ಮಕ್ಕಳಿಂದ ನಡೆದ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡಿ, ಇತರರಿಗೂ ತಿಳಿಸಿಕೊಡಿ, ನಿಮ್ಮ ಕಲಿಕೆಯಲ್ಲಿ ಸದಾ ಕ್ರಿಯಾಶೀಲತೆ ತುಂಬಲು ಯೋಗ ಸಹಕಾರಿ ಎಂಬುದನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಯೋಗ ಜಾತ್ಯಾತೀತವಾದುದು, ಇದಕ್ಕೆ ಪಕ್ಷ,ಜಾತಿ,ವಯಸ್ಸು, ಲಿಂಗ ಬೇಧವಿಲ್ಲ ಪ್ರತಿಯೊಬ್ಬರೂ ಇದನ್ನು ಕಲಿತು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬಹುದಾಗಿದೆ, ವೈಜ್ಞಾನಿಕವಾಗಿಯೂ ಇಂದು ಯೋಗ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಇಡೀ ವಿಶ್ವವೇ ಸ್ಪಂದಿಸಿದೆ, 200ಕ್ಕೂ ಹೆಚ್ಚು ದೇಶಗಳು ಇಂದು ಯೋಗದಿನ ಆಚರಿಸುತ್ತಿವೆ ಎಂದು ತಿಳಿಸಿದರು.
ಮಕ್ಕಳಿಂದ ಯೋಗ ಪ್ರದರ್ಶನ ಮಾಡಿಸಿದ ದೈಹಿಕ ಶಿಕ್ಷಕಿ ಲೀಲಾ, ಯೋಗಾಭ್ಯಾಸಕ್ಕಿಂತ ಉತ್ತಮವಾದ ವ್ಯಾಯಾಮವೇ ಇಲ್ಲ, ಇದು ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಶ್ವೇತಾ, ಸುಗುಣ, ಫರೀದಾ, ಸಿ.ಎಲ್.ಶ್ರೀನಿವಾಸಲು, ರಮಾದೇವಿ, ಡಿಚಂದ್ರಶೇಖರ್ ಮತ್ತಿತರರಿದ್ದರು.