ಕೋಲಾರ:- ಭಾರತೀಯ ಜನತಾಪಕ್ಷದ ನೂತನ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಅಭಿನಂದಿಸಿದರು.
ಬೆಂಗಳೂರಿನ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಪುಷ್ಪಗುಚ್ಚ ನೀಡಿ ಅಭಿನಂದಿಸಿದ ಅವರು, ರಾಜ್ಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿಯಲ್ಲೂ ಸ್ಥಾನ ನೀಡುವ ಮೂಲಕ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲು ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಇದೇ ಸಂದರ್ಭದಲ್ಲಿ ಬಿ.ಎಲ್.ಸಂತೋಷ್‍ಜಿ ಅವರನ್ನು ಮುಂದುವರೆಸಿರುವುದು ರಾಜ್ಯದಲ್ಲಿ ಪಕ್ಷಕ್ಕೆ ಬಲ ತಂದಿದೆ ಎಂದು ತಿಳಿಸಿದ್ದಾರೆ.
1983 ರಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಯಡಿಯೂರಪ್ಪ 8 ಬಾರಿ ಗೆಲುವು ಸಾಧಿಸಿ, ಈ ರಾಜ್ಯದ ಓರ್ವ ಯಶಸ್ವಿ,ಜನಪರ ಮುಖ್ಯಮಂತ್ರಿಯಾಗಿ ಬಿಜೆಪಿಯನ್ನು ಎರಡು ಬಾರಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸ್ಥಾನ ಕಲ್ಪಿಸುವ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಮಾರ್ಗ ಸುಲಭವಾಗಿದೆ, ಅವರ ನೇತೃತ್ವದಲ್ಲೇ ಬಿಜೆಪಿ ವಿಧಾನಸಭಾ ಚುನಾವಣೆ ಎದುರಿಸಲಿದ್ದು, ಓರ್ವ ಜನಪರ,ರೈತಪರ ನಾಯಕರಾದ ಯಡಿಯೂರಪ್ಪ ಅವರಿಗೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದು ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.