ಬರಹ : ಶಬೀನಾ. ವೈ.ಕೆ
“ಈ ಮಗುವನ್ನು ದೊಂಬರಾಟ ಆಡುವವರಿಗೆ ಕೊಟ್ಟು ಬಿಡಿ” ಎಂದು ಒಬ್ಬ ಮಹಿಳೆ ಹೇಳಿ ಬಿಟ್ಟರು. ಇದರಿಂದ ಕುಪಿತರಾದ ವಿಠ್ಠಪ್ಪ “ಅವಳು ನನ್ನ ಮಗಳು. ಬದುಕಿರುವ ತನಕ ನಾನೇ ಸಾಕುತ್ತೇನೆ” ಎಂದು ಬಂದವರ ಬಾಯಿ ಮುಚ್ಚಿಸಿ ಬಿಟ್ಟರು.
ಯಶೋದ ಕುಮಾರಿ ಹುಟ್ಟಿನಿಂದಲೇ ವಿಶೇಷಚೇತನರು. ಅವರ ಎಡಗಾಲು ಸಂಪೂರ್ಣ ರೂಪು ಪಡೆದಿರಲಿಲ್ಲ; ಇದ್ದ ಬಲಗಾಲಿಗೂ ಪೋಲಿಯೋ ಘಾಸಿ ನೀಡಿತ್ತು. ಹುಟ್ಟಿದ ಮಗುವನ್ನು ಜನರು ವೀಕ್ಷಿಸಲೆಂದೇ ಮೂರು ದಿನಗಳ ಕಾಲ ಹೊರಗಡೆ ತೊಟ್ಟಿಲಲ್ಲಿ ಇಟ್ಟಿದ್ದರು. ಆಗ ಮಗುವನ್ನು ನೋಡಲು ಬಂದವರೆಲ್ಲ ಶಾಪ ಹಾಕಿ ಹೋಗುತ್ತಿದ್ದರು. ಇಂತಹ ಕೊಂಕು ಮಾತುಗಳನ್ನು ಕುಟುಂಬ ಅದೇಷ್ಟೋ ಸಹಿಸಿಕೊಂಡಿತ್ತು.
ಆದರೆ, ಯಶೋದರ ತಾಯಿ ಜನರ ಮಾತಿನ ಆಘಾತದಿಂದ ಹೊರ ಬಂದಿರಲಿಲ್ಲ. ಬಹುಶಃ ತನಗೆ ಹುಟ್ಟುವ ಮಕ್ಕಳೆಲ್ಲ ಹೀಗೆ ಹುಟ್ಟುತ್ತವೆಯೋ ಎಂಬ ಹಣೆಪಟ್ಟಿಯೂ ಅವರಿಗೆ ಸಮಾಜ ನೀಡಿದ್ದುರ ಫಲವಾಗಿರಬಹುದು. ಪತಿಯ ಬಳಿ ” ನೀವು ಬೇರೊಂದು ಮದುವೆ ಮಾಡಿಕೊಳ್ಳಿ” ಎಂದು ಹೇಳಿದರು. ಅದಕ್ಕೆ ವಿಠ್ಠಪ್ಪರವರು ” ನಾನು ಬೇರೆ ಮದುವೆಯಾಗುವುದಿಲ್ಲ. ಹುಟ್ಟಿದರೆ ಇಂತಹ ಮಕ್ಕಳೇ ಹುಟ್ಟಲಿ… ನಾವು ಸಾಕೋಣ” ಎಂದು ತಾಯಿಯನ್ನು ಸಂತೈಸಿದರು. ನನ್ನ ತಂದೆ- ತಾಯಿ ತಳೆದ ಈ ತೀರ್ಮಾನದಿಂದಾಗಿಯೇ ನಾನಿಂದು ಜೀವಿಸುತ್ತಿದ್ದೇನೆ ಎಂದು ಯಶೋದ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತಸ ವ್ಯಕ್ತಪಡಿಸುತ್ತಾರೆ.
ವಿಕಲಚೇತನರು ಅದರಲ್ಲೂ ಮಹಿಳೆ ವಿಕಲಚೇತನಳಾದರೆ ಸಮಾಜ ಕಾಣುವ ದೃಷ್ಟಿಕೋನದ ಬವಣೆಯನ್ನು ಯಶೋದ ಕೂಡ ಅನುಭವಿಸಿದರು. ತನ್ನಷ್ಟಕ್ಕೆ ತಾನು ವಾಹನದಲ್ಲಿ ಹೋಗುತ್ತಿದ್ದರೆ,
“ಯವ್ವಾ , ಕಾಲು ಇಲ್ಲ ಏನಿಲ್ಲ ಎಲ್ಲಿ ಓಡಾಡ್ತೀಯಾ? ಸುಮ್ನೆ ಮನೇಲಿ ಕುತ್ಕೋಬಾರ್ದಾ” ಎಂದು ಒಬ್ಬ ಅಜ್ಜಿ ಹಾಗೂ ಮಹಿಳೆ ಹೀಯಾಳಿಸಿದ್ದು ಅವರ ನೆನಪಿನಲ್ಲಿ ಇನ್ನೂ ಅಚ್ಚಾಗಿಯೇ ಉಳಿದಿದೆ. ಹಾಗೆಯೇ ತನ್ನ ಸಹೋದರ ತನ್ನನ್ನು ಹೊತ್ತುಕೊಂಡು ಸಿಂಗಬಾಲದಲ್ಲಿರುವ ದೇವಸ್ಥಾನದ 250 ಮೆಟ್ಟಿಲುಗಳನ್ನು ಹತ್ತಿದ ಸವಿನೆನಪುಗಳೂ ಯಶೋದರ ಮನದಲ್ಲಿ ಮನೆ ಮಾಡಿವೆ.
ಶೈಕ್ಷಣಿಕ ಜೀವನದಲ್ಲಿ ಯಶೋದ ಅನುಭವಿಸಿದ ನೋವುಗಳೇ ಅಪಾರ. ಅಂಗವಿಕಲರಿಗೆ ಸೂಕ್ತವಾದ ವಿಶೇಷಚೇತನ ಸ್ನೇಹಿ ಶೌಚಾಲಯ, ರ್ಯಾಂಪ್ ರೈಲಿಂಗ್, ಅದರಲ್ಲಿಯೂ ಮುಖ್ಯವಾಗಿ ವ್ಹೀಲ್‌ಚೇರ್ ಸೌಲಭ್ಯ ಇಲ್ಲದಿರುವುದು ಗೆಳತಿಯರ ಜೊತೆ ಓಡಾಡಲೋ ಆಟವಾಡಲೋ ಸಾಧ್ಯವಾಗದೇ ಒಬ್ಬಂಟಿಯಾಗಿ ಕುಳಿತು ನೋಡುವಂತಾಯ್ತು. ಬೆಳ್ಳಿಗ್ಗೆ ಮನೆಯಲ್ಲೇ ಶೌಚಾಲಯಕ್ಕೆ ಹೋಗಿ ಶಾಲೆ ಬಿಡುವವರೆಗೂ ದೈನಂದಿನ ಅಗತ್ಯತೆಗಳನ್ನು ಕಟ್ಟಿಹಾಕಬೇಕಾಯ್ತು. ಹೆತ್ತವರು ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು. ಆದರೆ, ಯಶೋದರ ದೈನಂದಿನ ಬೇಡಿಕೆಗಳು ದೈಹಿಕ ಅಗತ್ಯತೆಗಳು ಪಿಯುಸಿಗೆ ಶಿಕ್ಷಣವನ್ನು ಕೊನೆಗೊಳುಸುವಂತೆ ಮಾಡಿದವು. ಮಗಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಆಸೆಯಿಂದ ಹೆತ್ತವರು ಶತಪ್ರಯತ್ನ ಮಾಡಿ ಕಾಲೇಜಿಗೆ ಕರೆದುಕೊಂಡು ಹೋದರಾದರೂ, ಎರಡನೇ ಅಂತಸ್ತಿನಲ್ಲಿರುವ ತರಗತಿಗಳಿಗೆ ಮೆಟ್ಟಿಲುಗಳನ್ನು ಹತ್ತಲು ಯಶೋದಾರಿಂದ ಸಾಧ್ಯವಾಗಲಿಲ್ಲ. ಶೌಚಾಲಯವೂ ಇಲ್ಲದಿರುವುದು ಶಿಕ್ಷಣವನ್ನು ಮೊಟಕುಗೊಳಿಸಲು ಬಹು ಮುಖ್ಯ ಕಾರಣವಾಯ್ತು. ಹೀಗಾಗಿಯೇ ಶಾಲಾ-ಕಾಲೇಜುಗಳು, ದೇವಸ್ಥಾನ, ಸಾರ್ವಜನಿಕ ಸ್ಥಳಗಳು, ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ, ಖಾಸಗಿ ಸಂಘ-ಸಂಸ್ಥೆ, ಮನೋರಂಜನಾ ಸ್ಥಳಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ವಿಕಲಚೇತನರಿಗೆ ಬೇಕಾಗುವ ಒಂದಿಷ್ಟು ಶೌಚಾಲಯ, ರ್ಯಾಂಪ್, ರೈಲಿಂಗ್, ವ್ಹೀಲ್‌ಚೇರ್‌ಗಳು ಇದ್ದಲ್ಲಿ ವಿಶೇಷಚೇತನರಿಗೂ ತಾವು ಸಮಾಜದಿಂದ ಬೇರ್ಪಟ್ಟಿಲ್ಲ ಎಂಬ ಭಾವನೆಯನ್ನು ಮೂಡಿಸಲು ಸಕಾರವಾಗಬಹುದು ಎಂದು ಯಶೋದ ಹೇಳುತ್ತಾರೆ.
ವಿಕಲಚೇತನರ ಕಲ್ಯಾಣಕ್ಕಾಗಿ ಮುಂದಡಿ ಇರಿಸಿದ ಯಶೋದ 15 ರಿಂದ 20 ವಿಕಲಚೇತನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿ ಉದ್ಯೋಗ ಕಲ್ಪಿಸಿದ್ದಾರೆ. ಹಿರಿಯ ನಾಗರಿಕರಿಗೆ ಮಾಸಾಶನ ಮಾಡಿಸುವುದು, ಆಕ್ಸೆಸಿಬಿಲಿಟಿ ಸೌಲಭ್ಯಗಳ ಮಾಹಿತಿ ಪಡೆದ ಬಳಿಕ ಎಂಆರ್‌ಡಬ್ಲ್ಯೂ ವಿಆರ್‌ಡಬ್ಲ್ಯೂ ಸಿಬ್ಬಂದಿಗಳೊಂದಿಗೆ ಸೇರಿ ಮತಗಟ್ಟಗಳಲ್ಲಿ ವಿಶೇಷಚೇತನರಿಗೆ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಲು ಚರ್ಚಿಸಿದರು.
ಶಿಕ್ಷಣ ಮೊಟಕುಗೊಳಿಸಿ ವರ್ಷಗಳು ಕಳೆದಿದ್ದರೂ ಓದಿಗೆ ವಯಸ್ಸಿನ ಮಿತಿ ಇಲ್ಲ, ಅಂಗವಿಕಲತೆಯೂ ಅಡ್ಡಿಯಲ್ಲ ಎಂಬುದನ್ನು ಯಶೋದ ಮತ್ತೊಮ್ಮೆ ನಿರೂಪಿಸಲು ಮುಂದಡಿ ಇರಿಸಿದ್ದಾರೆ. ಪ್ರಸ್ತುತ ಸ್ಪೆಷಲ್ ಡಿ.ಎಡ್ ಕೋರ್ಸ್ ಮಾಡುತ್ತಿರುವ ಅವರು ಅಂಗವಿಕಲ ಮಕ್ಕಳಿಗೆ ಒಬ್ಬ ಉತ್ತಮ ಮಾದರಿ ಶಿಕ್ಷಕಿಯಾಗುವ ಕನಸ್ಸನ್ನು ಕಾಣುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಬಾಗಲಕೋಟೆಯಿಂದ ಬಲು ದೂರದಲ್ಲಿರುವ ದಾವಣೆಗೆರೆಗೆ ಮಗಳು ಕಲಿಯಲು ಹೋಗುತ್ತೇನೆ ಎಂದಾಗ ತಂದೆ ಸಮ್ಮತಿ ನೀಡಿದರು. ಆದರೆ, ತಾಯಿಗಾದರೋ ಮಗಳಿಗೆ ಬೇಕಾದ ಸೌಲಭ್ಯಗಳು ಅಲ್ಲಿ ಸಿಗುತ್ತವೋ, ಇಲ್ಲವೋ ಎಂಬುದರ ಬಗ್ಗೆ ಆತಂಕ ಮನೆ ಮಾಡಿತ್ತು. ಸ್ನೇಹಿತರ ಜೊತೆ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಯಶೋದರಿಗೆ ತಾವು ಕಲಿಯುತ್ತಿರುವ ಸಂಸ್ಥೆಯಲ್ಲಿ ಇರುವ ಆಕ್ಸೆಸಿಬಿಲಿಟಿ ಸೌಲಭ್ಯಗಳು, ವಿಕಲಚೇತನ ಸ್ನೇಹಿ ಶೌಚಾಲಯಗಳು ವ್ಹೀಲ್ ಚೇರ್ ಹಾಗೂ ಇತರ ಸೌಲಭ್ಯಗಳಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಯಶೋದ, ಪ್ರಸ್ತುತ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಉಪಾಧ್ಯಕ್ಷೆಯಾಗಿದ್ದಾರೆ. ಅವರ ಶೈಕ್ಷಣಿಕ ಜೀವನದ ಕನಸು ಸಾಕಾರವಾಗಲಿ ಎಂಬ ಹಾರೈಕೆ ನಮ್ಮೆಲ್ಲರದ್ದಾಗಲಿ.