ಕೋಲಾರ ಆ.6 : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಸರ್ಕಾರದ ವೈಸ್‍ರಾಯ್‍ರವರ ನೇತೃತ್ವದಲ್ಲಿನ ಕಾರ್ಯಕಾರಿ ಮಂಡಳಿಯಲ್ಲಿ ನೀರಾವರಿ ಸದಸ್ಯರಾಗಿ ಅನೇಕ ಡ್ಯಾಂಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ಡಾ|| ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನು ಯರಗೋಳ್ ಬಳಿ ನಿರ್ಮಿಸಿರುವ ಡ್ಯಾಂಗೆ “ಡಾ|| ಬಿ.ಆರ್.ಅಂಬೇಡ್ಕರ್ ಡ್ಯಾಂ” ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ರವರಿಗೆ ಭಾರತೀಯ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಎಂ.ನಾರಾಯಣಸ್ವಾಮಿ ಮನವಿ ಪತ್ರದ ಮೂಲಕ ಕೋರಿರುತ್ತಾರೆ.
ಕೋಲಾರ ಜಿಲ್ಲೆಯು ದಲಿತ ಹೋರಾಟಗಳಿಗೆ ತವರೂರಾಗಿದ್ದು, ಇಲ್ಲಿ ದಲಿತ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಂಬೇಡ್ಕರ್ ಹೆಸರಿಡುವಂತೆ, ಇದರ ಜೊತೆಗೆ ಸದರಿ ಡ್ಯಾಂನ ಹತ್ತಿರ ಪ್ರವಾಸೋದ್ಯಮಕ್ಕೆ ಅನುಕೂಲಕರವಾದಂತಹ ಸುಂದರವಾದ ಉದ್ಯಾನವನವನ್ನು ನಿರ್ಮಿಸಿ ಅದರಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯನ್ನು ಅನಾವರಣ ಮಾಡುವಂತೆ ಸಹ ಒತ್ತಾಯಿಸಿರುತ್ತಾರೆ.
ಡಾ|| ಬಿ.ಆರ್.ಅಂಬೇಡ್ಕರ್ ರವರು ಭಾರತದ ಸಂವಿಧಾನದ ಶಿಲ್ಪಿಯಾಗಿರುವುದರ ಜೊತೆಗೆ ಇವರು ಸ್ವಾತಂತ್ರ್ಯ ಪೂರ್ವದಲ್ಲಿ 1942-46ರ ಅವಧಿಯಲ್ಲಿ ಅಂದಿನ ಬ್ರಿಟೀಷ್ ಸರ್ಕಾರದ ವೈಸ್‍ರಾಯ್ ರವರ ಕಾರ್ಯಕಾರಿ ಮಂಡಳಿಯಲ್ಲಿ ನೀರಾವರಿ ಸದಸ್ಯರಾಗಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಜಲ ಸಂಪನ್ಮೂಲಗಳ ಅತ್ಯುತ್ತಮ ಜಲ ನೀತಿಯಿಂದ ಹೇಗೆ ಬಹುಉಪಯೋಗಿ ಲಾಭಗಳು ಆಗುತ್ತದೆ ಎಂಬುವುದನ್ನು ಇವರ ನೇತೃತ್ವದಲ್ಲಿ ದಾಮೋದರ್ ನದಿ ಕಣಿವೆ ಯೋಜನೆ, ಮಹಾನದಿ(ಹಿರಾಕುಡ್) ಯೋಜನೆ, ಕೋಸಿ ಮತ್ತು ಚಂಬಲ್ ನದಿ ಡೆಕನ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಇವರಿಗೆ ನೀರಾವರಿ ಯೋಜನೆಗಳ ಕುರಿತು ಇವರುವ ಕಾಳಜಿಯನ್ನು ಪ್ರದರ್ಶಿಸಿರುತ್ತಾರೆ.
1956ರಲ್ಲಿ ಅಂತರ್ ರಾಜ್ಯ ಜಲ ವಿವಾದಗಳ ಕಾಯ್ದೆಯನ್ನು ರಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಇವರು ನೀರಾವರಿ ವೈಜ್ಞಾನಿಕ ತಜ್ಞರಾಗಿರುತ್ತಾರೆ. ನೀರಾವರಿ ಯೋಜನೆಗಳಿಗಾಗಿ ಶ್ರಮಿಸಿದ್ದಂತಹ ಇವರ ಹೆಸರನ್ನು ಯರಗೋಳ್ ಡ್ಯಾಂಗೆ ನಾಮಕರಣ ಮಾಡುವುದು ಸೂಕ್ತ ಹಾಗೂ ಪ್ರಸ್ತುತವಾಗಿರುತ್ತದೆ ಎಂದಿರುತ್ತಾರೆ.
ಈ ಸಂದರ್ಭದಲ್ಲಿ ಕೋಲಾರ ನಗರದಲ್ಲಿ ಮಳೆಯಿಂದ ಹದಗೆಟ್ಟಿರುವಂತಹ ರಸ್ತೆಗಳಿಂದ ಸುಗಮ ವಾಹನ ಮತ್ತು ಜನಸ ಸಂಚಾರಕ್ಕೆ ಆಗುತ್ತಿರುವಂತಹ ತೊಂದರೆಯನ್ನು ಗಮನಕ್ಕೆ ತಂದು ತಕ್ಷಣ ದುರಸ್ತಿ ಕಾರ್ಯಗಳನ್ನು ಕೈಗೊಂಡು ಸರಿಪಡಿಸುವಂತೆ ಸಂಬಂಧಪಟ್ಟ ಅಧಕಾರಿಗಳಿಗೆ ಆದೇಶಿಸುವಂತ ಕೋರಿರುತ್ತಾರೆ.
ಈ ಸಂದರ್ಭದಲ್ಲಿ ಕಲಾವಿದ ಮತ್ತಿಕುಂಟೆ ಕೃಷ್ಣ, ಮಾಹಿತಿ ಮಂಜುನಾಥ್, ಕರಾಟೆ ಯಲ್ಲಪ್ಪ, ಕೆಜಿಎಫ್ ಪೃತ್ವಿ ಹಾಗೂ ಇತರರು ಉಪಸ್ಥಿತರಿದ್ದರು.